Advertisement

ಕುವೈತ್‌ನಲ್ಲಿ 200 ಕನ್ನಡಿಗರು ಅತಂತ್ರ; ಉದ್ಯೋಗವೂ ಇಲ್ಲ, ಸಂಬಳವೂ ಇಲ್ಲ; ನೆರವಿಗೆ ಮೊರೆ

07:26 AM Jul 31, 2020 | mahesh |

ಬೀದರ: ಹೆಮ್ಮಾರಿ ಕೋವಿಡ್ ಅಟ್ಟಹಾಸದಿಂದಾಗಿ ಗಲ್ಫ್ ರಾಷ್ಟ್ರದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಯಲ್ಲಿ ಉದ್ಯೋಗವೂ ಇಲ್ಲದೆ, ಖರ್ಚಿಗೆ ಹಣವೂ ಇಲ್ಲದೆ
ಪರಿತಪಿಸುತ್ತಿರುವ ಬೀದರ ಮತ್ತು ಕಲಬುರಗಿ ಜಿಲ್ಲೆಯ ಕನ್ನಡಿಗರು ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಕಣ್ಣೀರು ಹಾಕುತ್ತಿದ್ದಾರೆ.

Advertisement

ಕೋವಿಡ್‌-19 ವಿಶ್ವದಾದ್ಯಂತ ಹಬ್ಬುತ್ತಲೇ ಇದ್ದು ಬಹುತೇಕ ರಾಷ್ಟ್ರಗಳು ವ್ಯಾಪಾರ ವಹಿವಾಟು ಇಲ್ಲದೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಅರಬ್‌ ದೇಶದ ಕುವೈತ್‌ನಲ್ಲಿ ನೆಲೆಸಿರುವ
ನೂರಾರು ಕನ್ನಡಿಗರು ಈಗ ಕೊರೊನಾ ಸಂಕಷ್ಟದಿಂದ ಕೆಲಸ ಕಳೆದುಕೊಂಡಿದ್ದಾರೆ. ಈ ಪೈಕಿ ಬೀದರ ಜಿಲ್ಲೆಯ ಸುಮಾರು 150 ಮತ್ತು ಕಲಬುರಗಿ ಜಿಲ್ಲೆಯ 50ಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದಾರೆ. ಅವರೆಲ್ಲರೂ ಈಗ ತವರಿಗೆ ಮರಳಲು ಹವಣಿಸುತ್ತಿದ್ದು, “ದಯವಿಟ್ಟು ನಮ್ಮ ನೆರವಿಗೆ ಬನ್ನಿ’ ಎಂದು ವಿಡಿಯೋ ಸಂದೇಶಗಳ ಮೂಲಕ ಸರ್ಕಾರಕ್ಕೆ
ಮನವಿ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಹಾಗೂ ಹೈದ್ರಾಬಾದ್‌ ಮೂಲದ ಮೇಘಾ ಕಂಪನಿಯ ಅವಾಂತರದಿಂದ ಈ ಕನ್ನಡಿಗರು ಕುವೈತ್‌ ನಲ್ಲಿ ಉಳಿದುಕೊಂಡು ಪರಿತಪಿಸುತ್ತಿದ್ದಾರೆ. ಸಣ್ಣ ಕಟ್ಟಡವೊಂದರಲ್ಲೇ ನೆಲೆಸಿರುವ ನೂರಾರು ಜನ ಜೀವ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಮುಖ್ಯಮಂತ್ರಿಗಳು, ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಕರೆದೊಯ್ಯಲು ಕ್ರಮ ವಹಿಸುವಂತೆ ಅಂಗಲಾಗುತ್ತಿದ್ದಾರೆ.

ಮೇಘಾ ಮೋಸ: ಹೈದ್ರಾಬಾದ್‌ನ ಮೇಘಾ ಇನ್ಫ್ರಾಸ್ಟ್ರಕ್ಚರ್‌ ಕಂಪನಿ ಕಳೆದ ಮೂರು ವರ್ಷಗಳ ಹಿಂದೆ ಈ ಕನ್ನಡಿಗರನ್ನು ದುಡಿಮೆಗಾಗಿ ಕುವೈತ್‌ ದೇಶಕ್ಕೆ ಕರೆದೊಯ್ದಿದ್ದು, ಅದರಲ್ಲಿ
ಬೀದರ ಜಿಲ್ಲೆಯ ಹುಮನಾಬಾದ, ಭಾಲ್ಕಿ ಮತ್ತು ಬಸವಕಲ್ಯಾಣ ತಾಲೂಕಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಮೇಘಾ ಕಂಪನಿ ಈ ನೌಕರರನ್ನು ಅರ್ಧದಲ್ಲೇ ಕೈಬಿಟ್ಟಿದೆ. ಆರು ತಿಂಗಳಿಂದ ವೇತನವೂ ಇಲ್ಲ, ಇರಲು ಮನೆಯೂ ಕಲ್ಪಿಸಿಲ್ಲ. ಅಷ್ಟೇ ಅಲ್ಲ ಭಾರತಕ್ಕೆ ತೆರಳಲು ವಿಮಾನ ಟಿಕೆಟ್‌ ಮಾಡಿಸಿರುವುದಾಗಿ ಸುಳ್ಳು ಹೇಳುತ್ತಾ ಬಂದಿದ್ದು, ನಕಲಿ ಟಿಕೆಟ್‌ ಗಳನ್ನು ತೋರಿಸಿ ಮೋಸ ಮಾಡಿದೆ ಎಂದು ಕನ್ನಡಿಗ ನೌಕರರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಒಂದು ತಿಂಗಳಿಂದ ಮೇಘಾ ಕಂಪನಿ ಕುವೈತ್‌ನಲ್ಲಿ ತನ್ನ ಕಚೇರಿ ಬಂದ್‌ ಮಾಡಿಕೊಂಡಿದೆ. ಈಗ ನಮ್ಮನ್ನು ರಕ್ಷಿಸುವವರೇ ಇಲ್ಲದಂತಾಗಿ ಅತಂತ್ರಕ್ಕೆ ಸಿಲುಕಿದ್ದೇವೆ. ಬೇರೆ ರಾಷ್ಟ್ರಗಳಲ್ಲಿದ್ದ ಕನ್ನಡಿಗರನ್ನು ವಂದೇ ಭಾರತ್‌ ಮಿಷನ್‌ ನಲ್ಲಿ ಕರೆದುಕೊಂಡು ಬಂದಂತೆ, ನಮ್ಮನ್ನು ಸಹ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಬೀದರನ ಶಿವಕುಮಾರ,
ಬಸವಕಲ್ಯಾಣದ ರಾಜಕುಮಾರ ಇನ್ನಿತರರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ಕುವೈತ್‌ನಲ್ಲಿ ಬೀದರ ಮತ್ತು ಕಲಬುರಗಿ ಯುವಕರು ಸಿಲುಕಿಕೊಂಡಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅವರ ಮಾಹಿತಿ ಪಡೆಯುತ್ತಿದ್ದೇನೆ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸಿ ಶೀಘ್ರದಲ್ಲಿ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಯಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಈಶ್ವರ ಖಂಡ್ರೆ, ಭಾಲ್ಕಿ ಶಾಸಕರು, ಮತ್ತು ಕಾರ್ಯಾಧ್ಯಕ್ಷರು, ಕೆಪಿಸಿಸಿ

ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next