ಬೆಂಗಳೂರು: ಹಜ್ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರಾರಂಭದಿಂದ ಕೊನೆವರೆಗೂ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ 200 ಹಜ್ ಸ್ವಯಂ ಸೇವಕರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸನ್ಮಾನಿಸಿದರು.
ನಗರದ ಹಜ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕ್ರಮದಲ್ಲಿ ಸ್ವಯಂ ಸೇವಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಪವಿತ್ರ ಹಜ್ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಸಹಾಯ ಮಾಡಿದ ಇವರ ಕಾರ್ಯವೂ ಶ್ಲಾಘನೀಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ವಂತ ಖರ್ಚಿನಲ್ಲಿ ಉಮ್ರಾ ಯಾತ್ರೆಗೆ ಕಳುಹಿಸಿದ 300 ಮಂದಿ ಯಾತ್ರಾರ್ಥಿಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು.
ಒಬ್ಬರು ಉಮ್ರಾ ಯಾತ್ರೆ ಕೈಗೊಳ್ಳಲು ಕನಿಷ್ಟ 55 ಸಾವಿರ ರೂ. ಖರ್ಚು ಬರುತ್ತದೆ. ಅದರಂತೆ ಎಲ್ಲ ಉಮ್ರಾ ಯಾತ್ರಾರ್ಥಿಗಳ ಸಂಪೂರ್ಣವನ್ನು ವೆಚ್ಚವನ್ನು ಸಚಿವರು ಸ್ವಂತವಾಗಿ ಭರಿಸಲಿದ್ದು ಇದು ಪುಣ್ಯದ ಕೆಲಸ ಎಂದು ಹೇಳಿದರು.
ಒಟ್ಟು 600 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 300 ಮಂದಿಯನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಸಚಿವ ಜಮೀರ್ ಅಹಮದ್, ಮೌಲಾನ ಪಿ.ಎಂ. ಮುಜಮ್ಮಿಲ್ ಸಾಹೇಬ್ ರಶಾದಿ ವಹಿಸಿದ್ದರು. ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಮತ್ತಿತರರು ಉಪಸ್ಥಿತರಿದ್ದರು.