Advertisement

ಬರೋಬ್ಬರಿ 200 ಕೋಟಿ ರೂ.! ಅಂಕೆ ಮೀರಿದ ಚುನಾವಣ ಅಕ್ರಮ

12:25 AM Apr 10, 2023 | Team Udayavani |

ಬೆಂಗಳೂರು: ಬರೋಬ್ಬರಿ 200 ಕೋಟಿ ರೂಪಾಯಿ! ರಾಜ್ಯದಲ್ಲಿ ಒಂದು ತಿಂಗಳಿನಲ್ಲಿ ಬೆಳಕಿಗೆ ಬಂದಿರುವ ಚುನಾವಣ ಅಕ್ರಮಗಳ ಮೊತ್ತ ಇದು. ಹಿಂದಿನ ಚುನಾವಣೆಗೆ ಹೋಲಿಸಿದರೆ ಇದು ಪತ್ತೆಯಾದ ದಾಖಲೆ ಮೌಲ್ಯದ ಅಕ್ರಮ.

Advertisement

“ಕರ್ನಾಟಕದಲ್ಲಿ ನಮಗೆ ಹಣಬಲವೇ ಸವಾಲು’ ಎಂದು ಮುಖ್ಯ ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಮಾ. 11ರಂದು ಆತಂಕ ವ್ಯಕ್ತಪಡಿಸಿದ್ದರು. ಅದು ಈಗ ನಿಜವಾಗುತ್ತಿದೆ. ಇದು ರಾಜ್ಯದಲ್ಲಿ ಆಮಿಷಮುಕ್ತ ಚುನಾವಣೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡಿಸಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಚುನಾವಣ ಅಧಿಸೂಚನೆ ಪ್ರಕಟವಾದಂದಿನಿಂದ ಮತದಾನದ ದಿನದ ವರೆಗಿನ ಜಪ್ತಿ 156 ಕೋಟಿ ರೂ. ಆಗಿತ್ತು.

ಮಾ. 9ರಂದು ಮುಖ್ಯ ಚುನಾವಣ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿದ್ದಾಗ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು “ಮುಹೂರ್ತ’ಕ್ಕಾಗಿ ಕಾಯಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಅಂದಿನಿಂದ ವೇಳಾಪಟ್ಟಿ ಪ್ರಕಟಗೊಂಡ ಮಾ. 29ರ ವರೆಗೆ ಜಪ್ತಿ ಮಾಡಲಾದ ಅಕ್ರಮಗಳ ಮೊತ್ತ 95ರಿಂದ 100 ಕೋಟಿ ರೂ. ಆಗಿದೆ ಎಂದು ಸ್ವತಃ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ಹೇಳಿದ್ದರು.

ಈಗ ಚುನಾವಣ ವೇಳಾಪಟ್ಟಿ ಪ್ರಕಟಗೊಂಡ ಮಾ. 29ರಿಂದ ಮಾ. 9ರ ತನಕ ಅಂದರೆ ಚುನಾವಣೆಗೆ ಅಧಿಕೃತ ಅಧಿಸೂಚನೆ ಹೊರಡಿಸಲು ಇನ್ನೂ ನಾಲ್ಕು ದಿನ ಇರುವಾಗಲೇ ಚುನಾವಣ ಅಕ್ರಮಗಳ ಮೊತ್ತ 99.18 ಕೋಟಿ ರೂ. ಆಗಿದ್ದು, ಶತಕದ ಅಂಚಿನಲ್ಲಿದೆ. ಮತದಾನಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಒಟ್ಟಾರೆಯಾಗಿ ಮಾ. 9ರಿಂದ ಇದುವರೆಗಿನ ಅವಧಿಯಲ್ಲಿ ಸರಿಸುಮಾರು 200 ಕೋ.ರೂ. ಮೊತ್ತದ ಚುನಾವಣ ಅಕ್ರಮಗಳನ್ನು ಬಯಲಿಗೆಳೆಯಲಾಗಿದೆ.

ಆಯೋಗದ ಬಿಗಿ ಕ್ರಮ
ಅಕ್ರಮಗಳ ಜಪ್ತಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಗಲು ಚುನಾವಣ ಆಯೋಗ ಕೈಗೊಂಡ ಬಿಗಿ ಕ್ರಮಗಳು ಕಾರಣ. ಚುನಾವಣ ಅಕ್ರಮ ಮತ್ತು ಆಮಿಷಗಳ ಮೇಲೆ ನಿಗಾ ಇರಿಸಲು ಕಳೆದ ಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರಕ್ಕೆ 6ರಂತೆ ಒಟ್ಟು 1,344 ಫ್ಲಯಿಂಗ್‌ ಸ್ಕ್ವಾಡ್‌, 1,255 ಸ್ಟಾಟಿಕ್‌ ಸರ್ವೇಲೆನ್ಸ್‌ ತಂಡಗಳನ್ನು ನಿಯೋಜಿಸಲಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯ 200 ಮೊಬೈಲ್‌ ಸ್ಕ್ವಾಡ್‌ಗಳನ್ನು ರಚಿಸಲಾಗಿತ್ತು. ಈ ಬಾರಿ ಈ ತಂಡಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲಾಗಿದ್ದು, 2,040 ಸಂಚಾರಿ ದಳಗಳು, 2,605 ಸ್ಥಿರ ಕಣ್ಗಾವಲು ತಂಡಗಳು, 266 ವೀಡಿಯೋ ವೀಕ್ಷಣೆ ತಂಡಗಳು, 631 ವೀಡಿಯೋ ಕಣ್ಗಾವಲು ತಂಡಗಳು, 225 ಲೆಕ್ಕಪರಿಶೋಧಕ ತಂಡಗಳು, 234 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ. 171 ಅಂತಾರಾಜ್ಯ ಗಡಿ ಚೆಕ್‌ ಚೆಕ್‌ ಪೋಸ್ಟ್‌ಗಳು ಸೇರಿ ಒಟ್ಟು 942 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.

Advertisement

146 ವೆಚ್ಚ ವೀಕ್ಷಕರ ನೇಮಕ
ಚುನಾವಣ ಆಯೋಗವು 146 ವೆಚ್ಚ ವೀಕ್ಷಕರನ್ನು ನೇಮಕ ಮಾಡಿದೆ. ಅವರು ಎ. 13ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.

ಅಕ್ರಮ ಜಪ್ತಿ
2013ರ ವಿಧಾನಸಭೆ ಚುನಾವಣೆ; 14.42 ಕೋ.ರೂ.
2014ರ ಲೋಕಸಭೆ ಚುನಾವಣೆ; 28.08 ಕೋ.ರೂ.
2018ರ ವಿಧಾನಸಭೆ ಚುನಾವಣೆ;156 ಕೋ.ರೂ.
2023ರ ವಿಧಾನಸಭೆ ಚುನಾವಣೆ;
ಮಾ. 9ರಿಂದ 27ರ ವರೆಗೆ
95ರಿಂದ 100 ಕೋ.ರೂ.;
ಮಾ. 29ರಿಂದ ಎ. 9ರ ವರೆಗೆ
99.18 ಕೋ.ರೂ.

 

 

Advertisement

Udayavani is now on Telegram. Click here to join our channel and stay updated with the latest news.

Next