ಕಲಬುರಗಿ: ಈ ಭಾಗದಲ್ಲಿ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪಿಸುವ ಗುರಿಹೊಂದಿದ್ದು, ಆದಷ್ಟು ಬೇಗ ಪ್ರಾರಂಭವಾಗಿ ಅದೊಂದು ಕಲೆ ಮತ್ತು ಸಂಸ್ಕೃತಿಯ ಬೀಡಾಗಬೇಕು ಎಂಬುದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀರ ರೇವೂರ ಹೇಳಿದರು.
ಗುರುವಾರ ನಗರದಲ್ಲಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂಯುಕ್ತಾಶ್ರಯ, ಅಜಿಂ ಪ್ರೇಮಜಿ ಫೌಂಡೇಶನ್, ಕರ್ನಾಟಕ ರಾಜ್ಯ ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿ, ವಿವಿಧ ಸಂಘಗಳ ಸಹಯೋಗದಲ್ಲಿ ಅಜಿಂ ಪ್ರೇಮಜಿ ಫೌಂಡೇಶನ್‌ದಲ್ಲಿ ನಡೆಯುತ್ತಿರುವ ಹೊಸ ಸಾಧ್ಯತೆಗಳು, ಹೊಸ ಪರಿಕಲ್ಪನೆಗಳು ರಾಜ್ಯ ದೃಶ್ಯಕಲಾ ಅಧ್ಯಾಪಕರ ಚಿಂತನ-ಮಂಥನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿಗಳು ನಮ್ಮ ಪ್ರದೇಶದಲ್ಲಿ ಈ ಕಾರ್ಯಾಗಾರ ಹಮ್ಮಿಕೊಂಡಿರುವುದು ಮಾದರಿಯಾಗಿದೆ. ಚಿತ್ರ ಶಿಲ್ಪ ಹಾಗೂ ವಾಸ್ತು ಶಿಲ್ಪಗಳು ಸಮಾಜದ ಆಸ್ತಿಗಳಾಗಿದ್ದು, ಮಾನವನ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆ ನೀಡಿವೆಯಲ್ಲದೇ, ಸಂಸ್ಕೃತಿಯ ಮುಖ್ಯ ಅಂಗಗಳಾಗಿವೆ ಎಂದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ ಅಷ್ಠಗಿ ಶಿಬಿರಾರ್ಥಿಗಳಿಗೆ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಅರ್ಕಸಾಲಿ ಮಾತನಾಡಿ, ಅಕಾಡೆಮಿಗಳು ಸಮಾಜದ ಜೊತೆ ಕೈಜೋಡಿಸಿ ಹೊಸ ಚಿಂತನೆಗಳ ಮೂಲಕ ತಮ್ಮತನ ಉಳಿಸಿಕೊಳ್ಳುತ್ತಾ ಬಂದಿವೆ ಎಂದರು.
ಕಲಾ ಶಿಕ್ಷಣದ ಸ್ಥಿತಿ-ಗತಿ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರಾದ ಪ್ರೊ| ವಿ.ಜಿ. ಅಂದಾನಿ, ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಭಿರಾರ್ಥಿಗಳಿಗೆ ದೃಶಕಲಾ ಶಾಲೆಗಳು ಹಾಗೂ ಕಲಾ ಕ್ಷೇತ್ರದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿದರು. ನಂತರ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪ್ರಾಧ್ಯಾಪಕರು ಸವಾಲುಗಳನ್ನು ಮೆಟ್ಟಿನಿಂತು, ತಮ್ಮ ಕಲಾ ಉಪನ್ಯಾಸ ವೃತ್ತಿಗೆ ನ್ಯಾಯ ಒದಗಿಸಬೇಕು ಎಂದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ತನ್ನ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದೃಶ್ಯಕಲಾ ಅಧ್ಯಾಪಕರ ಕಾರ್ಯಾಗಾರ ಏರ್ಪಡಿಸಿದ್ದು ಇತಿಹಾಸದಲ್ಲೇ ಪ್ರಥಮವಾಗಿದೆ. ಇದರಲ್ಲಿ ಅನೇಕ ವಿದ್ವಾಂಸರು ತಮ್ಮ ಅನುಭವ ಧಾರೆ ಎರೆಯಲಿದ್ದಾರೆ ಎಂದರು.
ಕರ್ನಾಟಕ ಲಲಿತಾ ಕಲಾ ಅಕಾಡೆಮಿ ರಿಜಿಸ್ಟಾರ್ ಚಂದ್ರಶೇಖರ ಆರ್. ವಂದಿಸಿದರು, ಕರ್ನಾಟಕ ಲಲಿತಾ ಅಕಾಡೆಮಿ ಸದಸ್ಯ ಹಣಮಂತರಾವ್ ವಿ. ಮಂತಟ್ಟಿ ಸ್ವಾಗತಿಸಿದರು, ಇನ್ನೋರ್ವ ಸದಸ್ಯ ನರಸಿಂಹಮೂರ್ತಿ ನಿರೂಪಿಸಿದರು, ವರ್ಣಾ ಧರ್ಮಗಿರಿ ಸ್ವಾಗತಗೀತೆ ಹಾಡಿದರು. ರಾಜ್ಯದ ದೃಶಕಲಾ ಮಹಾವಿದ್ಯಾಲಯಗಳ 80 ಪ್ರಾಧ್ಯಾಪಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.