Advertisement

ಕ್ರೀಡಾ ಸಚಿವಾಲಯದಿಂದ 200 ಕೋಟಿ ರೂ. ನೆರವು ಕೇಳಿದ ಐಒಎ

08:47 AM May 19, 2020 | Sriram |

ಹೊಸದಿಲ್ಲಿ: ಕೋವಿಡ್‌-19ನಿಂದಾದ ನಷ್ಟವನ್ನು ತುಂಬಿಸಿಕೊಡಲು ಭಾರತೀಯ ಒಲಿಂಪಿಕ್‌ ಅಸೋಸಿಯೇಶನ್‌ (ಐಒಎ) ಕೇಂದ್ರ ಕ್ರೀಡಾ ಸಚಿವಾಲಯದ ಬಳಿ ರವಿವಾರ 200 ಕೋಟಿ ರೂ. ಮೊತ್ತದ ಏಕ ಕಂತಿನ ಹಣಕಾಸಿನ ನೆರವನ್ನು ಕೇಳಿದೆ. ಇನ್ನು ಒಂದು ವರ್ಷ ಕಾಲ ಯಾವುದೇ ಪ್ರಾಯೋಜಕರು ಕೈಹಿಡಿಯುವ ಸಾಧ್ಯತೆ ಇಲ್ಲದ ಕಾರಣ ಈ ನೆರವನ್ನು ಐಒಎ ಅಪೇಕ್ಷಿಸಿದೆ.

Advertisement

ಈ ಕುರಿತು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ಅವರು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಪತ್ರ ಬರೆದಿದ್ದು, ಕೇಂದ್ರದಿಂದ ಹಣಕಾಸಿನ ನೆರವು ಲಭಿಸದೆ ಹೋದರೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಕಷ್ಟವಾಗುತ್ತದೆ ಎಂದಿದ್ದಾರೆ.

ಮೊತ್ತದ ವಿಂಗಡಣೆ
ಐಒಎಗೆ 10 ಕೋಟಿ ರೂ., ಒಲಿಂಪಿಕ್‌ ನ್ಪೋರ್ಟ್ಸ್ನ ಪ್ರತಿಯೊಂದು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ (ಎನ್‌ಎಸ್‌ಎಫ್‌) ತಲಾ 5 ಕೋಟಿ ರೂ., ಒಲಿಂಪಿಕ್ಸ್‌ ನ್ಪೋರ್ಟ್ಸ್ ವ್ಯಾಪ್ತಿಯಲ್ಲಿಲ್ಲದ ಎನ್‌ಎಸ್‌ಎಫ್‌ಗಳಿಗೆ ತಲಾ 2.5 ಕೋಟಿ ರೂ., ಪ್ರತಿಯೊಂದು ರಾಜ್ಯ ಒಲಿಂಪಿಕ್‌ ಅಸೋಸಿಯೇಶನ್‌ಗಳಿಗೆ ತಲಾ ಒಂದು ಕೋಟಿ ರೂ. ನೆರವು ನೀಡಬೇಕೆಂದು ನರೀಂದರ್‌ ಬಾತ್ರಾ ಸೂಚಿಸಿದ್ದಾರೆ.

“ಲಾಕ್‌ಡೌನ್‌ನಿಂದಾಗಿ ಇಡೀ ಜಗತ್ತಿನಲ್ಲಿ ಕ್ರೀಡಾ ಚಟುವಟಿಕೆ ನಿಂತು ಹೋಗಿದೆ. ಇದು ಪುನರಾರಂಭಗೊಂಡು ಮುಂದಿನ ಒಂದು ವರ್ಷ ಕಾಲ ಕ್ರೀಡೆಗಳಿಗೆ ಪ್ರಾಯೋಜಕರು ಲಭಿಸುತ್ತಾರೆಂಬ ನಂಬಿಕೆ ಇಲ್ಲ. ಇದರಿಂದ ಕ್ರೀಡಾ ಸಿದ್ಧತೆಗೆ, ತರಬೇತಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ಕೇಂದ್ರ ಕ್ರೀಡಾ ಸಚಿವಾಲಯ ನೆರವಿಗೆ ನಿಲ್ಲುವುದೊಂದೇ ಮಾರ್ಗವಾಗಿದೆ’ ಎಂದು ನರೀಂದರ್‌ ಬಾತ್ರಾ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಸದ್ಯ ಇದಕ್ಕೆ ಕ್ರೀಡಾ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪ್ರಧಾನಿ ನಿಧಿಗೆ ಭಾರೀ ಮೊತ್ತ
ಆದರೆ ಇದೇ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ ಮತ್ತು ಎನ್‌ಎಸ್‌ಎಫ್‌ ಒಟ್ಟುಗೂಡಿ ಪ್ರಧಾನಿ ಪರಿಹಾರ ನಿಧಿಗೆ 9.5 ಕೋಟಿ ರೂ. ನೀಡಿರುವುದು ಉಲ್ಲೇಖನೀಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next