Advertisement

ಹೊಸ ರುದ್ರಭೂಮಿ ನಿರ್ಮಾಣಕ್ಕೆ 200 ಕೋಟಿ ಮೀಸಲು

11:50 AM Jan 18, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಸ್ಮಶಾನ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ 200 ಕೋಟಿ ರೂ. ಮೀಸಲಿಡಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್‌ ಹೇಳಿದ್ದಾರೆ. 

Advertisement

ಮಂಗಳವಾರ ಪಾಲಿಕೆ ವ್ಯಾಪ್ತಿಯ ವಿಲ್ಸನ್‌ ಗಾರ್ಡನ್‌, ಕಲ್ಲಹಳ್ಳಿ ಚಿತಾಗಾರ ಮತ್ತು ರುದ್ರಭೂಮಿಗಳಿಗೆ ಸಮಿತಿಯ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರುದ್ರಭೂಮಿಗಳಲ್ಲಿ ಶವಗಳನ್ನು ಹೂಳಲು ಜಾಗವಿಲ್ಲದೆ ಬಹುತೇಕ ಸ್ಮಶಾನವೆಲ್ಲಾ ಗೋರಿಗಳಿಂದ ತುಂಬಿಹೋಗಿರುವುದನ್ನು ಗಮನಿಸಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿನ 131 ರುದ್ರಭೂಮಿಗಳಿವೆ. ಬಹುತೇಕ ಎಲ್ಲ ಕಡೆಯೂ ಇದೇ ರೀತಿಯ ಪರಿಸ್ಥಿತಿ ಇದೆ. ಹೀಗಾಗಿ ಹೊಸ ರುದ್ರಭೂಮಿ ನಿರ್ಮಾಣಕ್ಕೆ ಜಾಗ ನಿಗದಿ ಮಾಡುವ ಅವಶ್ಯಕತೆಯಿದೆ. ಅದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ 200 ಕೋಟಿ ರೂ. ಹಣ ಮೀಸಲಿಡಲಾಗುವುದು ಎಂದು ತಿಳಿಸಿದರು.

ನಗರದ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾ ಗಿರುವ ಮಾಸ್ಟರ್‌ಪ್ಲಾನ್‌ನಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿರಿಸುವ ಕುರಿತು ಪ್ರಸ್ತಾಪಿಸಿಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ನಗರದ ಯಾವುದಾದರೂ ಭಾಗದಲ್ಲಿ ಒತ್ತುವರಿ ತೆರವು ಮಾಡಿರುವ ಜಾಗವನ್ನು ಹೊಸ ರುದ್ರಭೂಮಿ ನಿರ್ಮಾಣಕ್ಕೆ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ರುದ್ರಭೂಮಿಗಳನ್ನು ಉದ್ಯಾನವನದ ಮಾದರಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ರುದ್ರಭೂಮಿಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

Advertisement

ರುದ್ರಭೂಮಿಯಲ್ಲಿ ಕಸದ ರಾಶಿ
ವಿಲ್ಸನ್‌ ಗಾರ್ಡನ್‌ ರುದ್ರಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಕಸದ ರಾಶಿ ಬಿದ್ದಿರುವುದನ್ನು ಕಂಡು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ರುದ್ರಭೂಮಿಯ ಒಂದು ಭಾಗದಲ್ಲಿ ಪೊದೆಗಳು ಬೆಳೆದು ಕಾಡಿನಂತಾಗಿದ್ದು, ಕಸ ವಿಲೇವಾರಿ ಕೇಂದ್ರದಂತೆ ಭಾಸವಾಗುತ್ತದೆ. ಕೂಡಲೆ ರುದ್ರಭೂಮಿ ಸ್ವತ್ಛ
ಗೊಳಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀಲಂ ಸಂಜೀವರೆಡ್ಡಿ ಸಮಾಧಿ ಸ್ಮಾರಕವಾಗಿ ಮಾರ್ಪಾಡು
ಕಲ್ಲಹಳ್ಳಿಯಲ್ಲಿರುವ ಮಾಜಿ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡಲಾಗುವುದು ಎಂದು ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌ ತಿಳಿಸಿದರು. ಅದಕ್ಕಾಗಿ ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗುವುದು. ಕಲ್ಲಹಳ್ಳಿ ರುದ್ರಭೂಮಿಯಲ್ಲಿ ವಿದ್ಯುತ್‌ ದೀಪ, ನೀರಿನ ವ್ಯವಸ್ಥೆ ಸರಿಪಡಿಸಲಾಗುವುದು, ಕಲ್ಲಹಳ್ಳಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮತ್ತೂಂದು ವಿದ್ಯುತ್‌ ಚಿತಾಗಾರ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next