Advertisement

ನಗರದಲ್ಲಿ ದ್ವಿಶತಕ ದಾಟಿದ ಕೋವಿಡ್‌ 19 ಸೋಂಕು ಪ್ರಕರಣ

04:46 AM May 16, 2020 | Team Udayavani |

ಬೆಂಗಳೂರು: ನಗರದಲ್ಲಿ ಶುಕ್ರವಾರ 13 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿಗೊಳಗಾದವರ ಸಂಖ್ಯೆ ದ್ವಿಶತಕದ ಗಡಿದಾಟಿದೆ. 13 ಸೋಂಕು ಪ್ರಕರಣಗಳ ಪೈಕಿ ಶಿವಾಜಿ ನಗರದಲ್ಲಿ 1, ಮಂಗಮ್ಮನಪಾಳ್ಯದಲ್ಲಿ  ಇಬ್ಬರು ಸೋಂಕಿತರಾಗಿದ್ದಾರೆ. ಶಿವಾಜಿನಗರದಲ್ಲಿ ಕಂಪನಿಯೊಂದರಲ್ಲಿ ಹೌಸ್‌ ಕೀಪಿಂಗ್‌ ಮಾಡುತ್ತಿದ್ದ (ಸೋಂಕಿತ – 653) 35 ವರ್ಷದ ಪುರುಷನಿಂದ ಆತನ ರೂಂಮೇಟ್‌ ಆಗಿದ್ದ 11 ಮಂದಿಗೆ ಸೋಂಕು ಹರಡಿದೆ.

Advertisement

ಇನ್ನು ಈ 35 ವರ್ಷದ ಸೋಂಕಿತನಿಗೆ 28 ವರ್ಷದ ಮಹಿಳೆಯಿಂದ ಸೋಂಕು ಬಂದಿತ್ತು. ಇನ್ನು ಈ ಮಹಿಳೆಗೆ ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಹೊಂದಿದ್ದ ಸೋಂಕಿತನ ತಪಾಸಣೆ ನಡೆದಿದ್ದ ಸ್ಥಳಿಯ ಖಾಸಗಿ ಆಸ್ಪತ್ರೆ ಸೋಂಕಿತ ವೈದ್ಯನಿಂದ ಸೋಂಕು ತಗುಲಿತ್ತು. ಮಂಗಮ್ಮನಪಾಳ್ಯ  ದಲ್ಲಿ ಮಂಗಳವಾರ ಸೋಂಕು ದೃಢಪಟ್ಟಿದ್ದ 35 ವರ್ಷದ ಸೋಂಕಿತನಿಂದ ಆರು ವರ್ಷದ ಮಗು ಹಾಗೂ 32 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಸೋಂಕಿತರನ್ನು ನಗರದ ಕೋವಿಡ್‌ 19  ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಸಂಖ್ಯೆ 202ಕ್ಕೆ ಏರಿಕೆ: ಸೋಂಕು ಆರಂಭದ ದಿನದಿಂದಲೂ ನಿರಂತರವಾಗಿ ಬೆಂಗಳೂರಿನಲ್ಲಿ ಪ್ರಕರಣಗಳು ದೃಢಪಡುತ್ತಿದ್ದವು. ಆರಂಭದಲ್ಲಿ ವಿದೇಶಗಳಿಂದ ಬಂದ ಟೆಕ್ಕಿಗಳಲ್ಲಿ ಸೋಂಕು  ಪತ್ತೆಯಾಗುತ್ತಿತ್ತು. ಬಳಿಕ ಅವರ ಸಂಬಂಧಿಗಳು, ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಹರಡಿತು.

ಆನಂತರ ತಬ್ಲೀ ಜಮಾತ್‌ ಮರ್ಕಾಜ್‌ ಪ್ರಕರಣಗಳು, ಪಾದರಾಯನಪುರದ ಪ್ರಕರಣಗಳು, ಹೊಂಗಸಂದ್ರ ಕಟ್ಟಡ ಕಾರ್ಮಿಕರ ಸೋಂಕು  ಪ್ರಕರಣಗಳು, ಪಾದರಾಯನಪುರ ರ್‍ಯಾಂಡಮ್‌ ಪರೀಕ್ಷೆ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ಸೋಂಕಿತ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ. ಶುಕ್ರವಾರದ ಅಂತ್ಯಕ್ಕೆ ಒಟ್ಟಾರೆ ಸೋಂಕಿತರ ಸಂಖ್ಯೆ 202ಕ್ಕೆ ಏರಿಕೆಯಾಗಿದ್ದು, 101 ಮಂದಿ ಸೋಂಕಿತರು ಗುಣಮುಖರಾಗಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next