Advertisement

200 ಹಾಸಿಗೆ ಆಸ್ಪತ್ರೆ ಕೋವಿಡ್ 19 ಗೆ ಮೀಸಲು

04:09 PM Apr 01, 2020 | Suhan S |

ಬಾಗಲಕೋಟೆ: ಕೋವಿಡ್ 19 ಭೀತಿ ಮುಂದುವರಿದಿದ್ದು, ಈ ಸೋಂಕು ತಗುಲಿದವರಿಗೆ ಮುಖ್ಯವಾಗಿ ಬೇಕಾಗುವ ವೆಂಟಿಲೇಟರ್‌ಗಳೇ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದಲ್ಲಿಲ್ಲ.

Advertisement

ಹೌದು, ಜಿಲ್ಲಾ ಆಸ್ಪತ್ರೆಯಲ್ಲಿ ಸಧ್ಯ ಕೇವಲ 3 ವೆಂಟಿಲೇಟರ್‌ಗಳಿದ್ದು, ಇನ್ನೂ 20ವೆಂಟಿಲೇಟರ್‌ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ. ಕೋವಿಡ್ 19ಶಂಕಿತರು ಕಂಡು ಬಂದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು 10 ಹಾಸಿಗೆ ಪ್ರತ್ಯೇಕ ಕೊಠಡಿ ಹಾಗೂ ಒಂದು ವೇಳೆ ಕೋವಿಡ್ 19 ವೈರಸ್‌ ತಗುಲಿದ ವ್ಯಕ್ತಿಗಳು ಕಂಡು ಬಂದಲ್ಲಿ ಅವರಿಗಾಗಿ 6 ಹಾಸಿಗೆಗಳ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಅದೃಷ್ಟಶಾತ್‌ ಜಿಲ್ಲೆಯಲ್ಲಿ ಈ ರೋಗ ಕಂಡು ಬಂದಿಲ್ಲವಾದರೂ ಅಗತ್ಯ ಮುಂಜಾಗೃತೆ ಕ್ರಮಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಸ್ಪತ್ರೆ ಸಜ್ಜಾಗಿದೆ.

200ಹಾಸಿಗೆ ಆಸ್ಪತ್ರೆ ಕೋವಿಡ್ 19ಗೆ ಮೀಸಲು: ನವನಗರದ ಜಿಲ್ಲಾ ಆಸ್ಪತ್ರೆ ಒಟ್ಟು 300 ಹಾಸಿಗೆ ಹೊಂದಿದ್ದು, ಆಡಳಿತಾತ್ಮಕ ಕೊಠಡಿಗಳ ಬಳಕೆ ಹೊರತುಪಡಿಸಿ, ಸುಮಾರು 220 ಬೆಡ್‌ಗಳು ಚಾಲ್ತಿಯಲ್ಲಿವೆ. ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತ ಕ್ರಮ ಕೈಗೊಂಡಿದ್ದು, ಇಬ್ಬರು ತಜ್ಞ ವೈದ್ಯರು, ಆರು ಜನ ಪ್ರತ್ಯೇಕ ಸಿಬ್ಬಂದಿಯನ್ನು ಕೊರೊನಾ ವಿಭಾಗಕ್ಕಾಗಿ ಅಗತ್ಯ ತರಬೇತಿಯೊಂದಿಗೆ ನಿಯೋಜನೆ ಮಾಡಲಾಗಿದೆ.

ರಾಜ್ಯಾದ್ಯಂತ ಕೋವಿಡ್ 19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಜಿಲ್ಲೆಯಲ್ಲೂ ಈ ರೋಗದ ಕುರಿತು ಭೀತಿ ಹೆಚ್ಚಾಗುತ್ತಿದೆ. ಅಲ್ಲದೇ ಕೋವಿಡ್ 19 ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿರುವ ಕೇರಳ, ಮಹಾರಾಷ್ಟ್ರದಿಂದ ಅತಿಹೆಚ್ಚು ಜನರು ಜಿಲ್ಲೆಗೆ ಬಂದಿದ್ದು, ಸದ್ಯಕ್ಕೆ ಅವರ ಮೇಲೆ ನಿಗಾ ಇಡಲಾಗಿದೆ. ಈಗ 14 ದಿನಗಳ ಬಳಿಕವೂ ಕಾಣಿಸಿಕೊಳ್ಳುವ ಲಕ್ಷಣ ಹೊಂದಿದ್ದು, ಯಾವುದೇ ಸಂದರ್ಭದಲ್ಲಿಸೋಂಕಿತರು ಪತ್ತೆಯಾದರೆ ಅಗತ್ಯ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆ ತಯಾರಿದೆ.

ಚಿಕಿತ್ಸೆಗಾಗಿ ಮುಂಜಾಗ್ರತ ಕ್ರಮವಾಗಿ ಇಡೀ ಜಿಲ್ಲಾ ಆಸ್ಪತ್ರೆಯನ್ನೇ ಕೋವಿಡ್ 19ಕ್ಕೆ ಮೀಸಲಿಡಲು ಚಿಂತನೆ ನಡೆದಿದ್ದು, 200 ಹಾಸಿಗೆಗಳನ್ನೂ ಶಂಕಿತರು ಕಂಡು ಬಂದಲ್ಲಿ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕೂಡ ಸಲ್ಲಿಕೆಯಾಗಿದ್ದು, ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ನಗರದ 50 ಹಾಸಿಗೆಯ ಆಸ್ಪತ್ರೆಗೆ ವರ್ಗಾಯಿಸಿ, ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ 19 ವೈರಸ್‌ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲು ತಯಾರಿ ನಡೆದಿದೆ ಎನ್ನಲಾಗಿದೆ.

Advertisement

ಸಚಿವರು ಸ್ಪಂದಿಸಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಏ. 1ರಂದು ಮಧ್ಯಾಹ್ನ 12ಕ್ಕೆ ನವನಗರದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಕೋವಿಡ್ 19 ಭೀತಿ ಹಾಗೂ ಮುಂಜಾಗ್ರತೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ಸಭೆ ನಡೆಸಲಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಇನ್ನೂ 20 ವೆಂಟಿಲೇಟರ್‌ಗಳ ಬೇಡಿಕೆ ಸಲ್ಲಿಸಿದ್ದು, ಇದರ ಜತೆಗೆ ಸರ್ಕಾರಿ ಆಸ್ಪತ್ರೆಗೆ ಬೇಕಾಗುವ ಎಲ್ಲ ರೀತಿಯ ಸೌಲಭ್ಯ ತಕ್ಷಣ ಒದಗಿಸಲು ಮುಂದಾಗಲಿ ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ3 ವೆಂಟಿಲೇಟರ್‌ ಇವೆ. ಕುಮಾರೇಶ್ವರ ಆಸ್ಪತ್ರೆಯವರು 10, ಕೆರೂಡಿ ಆಸ್ಪತ್ರೆಯವರು 2 ವೆಂಟಿಲೇಟರ್‌ ನೀಡಲು ಮುಂದಾಗಿದ್ದಾರೆ. ಆದರೂ, ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಇನ್ನೂ 20 ವೆಂಟಿಲೇಟರ್‌ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸಿಎಂ ಕಾರಜೋಳ ಅವರ ಗಮನಕ್ಕೂ ತರಲಾಗಿದೆ. ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ, ಜಿಲ್ಲಾಧಿಕಾರಿ

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next