ಬೆಂಗಳೂರು/ಕುಂದಾಪುರ: ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ 19 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಜತೆ ಒಪ್ಪಂದ ವಾಗಿದ್ದು ಉಡುಪಿಗೆ 200 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಮಂಜೂರಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಅವರ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿ, ನಿಯಮದಂತೆ 50 ಸಾವಿರಕ್ಕಿಂತ ಹೆಚ್ಚು ನೋಂದಾಯಿತ ವಿಮಾದಾರರು ಇದ್ದರೆ 100 ಹಾಸಿಗೆ ಆಸ್ಪತ್ರೆ, 3 ಸಾವಿರಕ್ಕಿಂತ ಹೆಚ್ಚಿದ್ದರೆ ಡಿಸ್ಪೆನ್ಸರಿ ದೊರೆಯತ್ತದೆ. ದ.ಕ. ಜಿಲ್ಲೆಯ ಬಂಟ್ವಾಳ, ಉಜಿರೆ, ಗಂಜಿಮಠ, ಉಡುಪಿಯ ಪಡು ಬಿದ್ರೆಗೆ ಡಿಸ್ಪೆನ್ಸರಿ ಮಂಜೂರಾಗಿದೆ ಎಂದರು.
ಕೇಂದ್ರ ಸರಕಾರ ಪ್ರತೀ ಮೂರು ತಿಂಗಳಿಗೊಮ್ಮೆ ಬಿಲ್ ನೀಡಿದಾಗ ಅನುದಾನ ಬಿಡುಗಡೆ ಮಾಡುತ್ತಿದ್ದು, ರಾಜ್ಯದಲ್ಲಿ 45 ಲಕ್ಷ ಜನ ವಿಮಾದಾರರು, 1.8 ಕೋ. ಜನ ಸೌಲಭ್ಯ ಪಡೆ ಯತ್ತಾರೆ. ಕಳೆದ ವರ್ಷದ 149.8 ಕೋ.ರೂ. ಚಿಕಿತ್ಸಾ ಬಾಬ್ತು ನೀಡಿದೆ. ಯಾವುದೇ ಬಾಕಿ ಇಲ್ಲ ಎಂದರು.
ಇದಕ್ಕೆ ಮುನ್ನ ಯು.ಟಿ. ಖಾದರ್, ಸೂಪರ್ ಸ್ಪೆಷಾಲಿಟಿ ಇಎಸ್‌ಐ ಆಸ್ಪತ್ರೆಯನ್ನು ಸಂಖ್ಯೆಯ ಬದಲು ಭೌಗೋಳಿಕವಾಗಿ ಪರಿಗಣಿಸಿ ನೀಡಬೇಕು. ಈ ಕುರಿತು ಕರಾವಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು. ಮಂಗಳೂರು ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕವಾಗಬೇಕು. ಖಾಸಗಿ ಯವರಿಗೆ ಪಾವತಿಸಬೇಕಾದ ಬಾಕಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
“ಉದಯವಾಣಿ’ ವರದಿ
ಇಎಸ್‌ಐ ಆಸ್ಪತ್ರೆಯ ಕುರಿತಾಗಿ ಕರಾವಳಿಯ ಸಮಸ್ಯೆ ಹಾಗೂ ಬೇಡಿಕೆ ಕುರಿತು “ಉದಯವಾಣಿ’ ಮಾ.11ರಂದು “ಪಾವತಿ ವಿಳಂಬ, ಚಿಕಿತ್ಸೆಗೆ ಇಎಸ್‌ಐ ನೌಕರರ ಪರದಾಟ’ ಎಂದು ವಿಶೇಷ ವರದಿ ಪ್ರಕಟಿಸಿತ್ತು.