Advertisement

20 ವರ್ಷಗಳಲ್ಲೇ ಅತ್ಯಧಿಕ ಕಾಡ್ಗಿಚ್ಚು: ಅರಣ್ಯ ಸಂಪತ್ತು ಬೆಂಕಿಗಾಹುತಿ

03:50 AM Feb 28, 2017 | |

ಬೆಂಗಳೂರು: ರಾಜ್ಯದ ಅರಣ್ಯ ಭಾಗದಲ್ಲಿ ಇತ್ತೀಚೆಗೆ ಕಾಡ್ಗಿಚ್ಚು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾಕಷ್ಟು ನಿಯಂತ್ರಣ ಕ್ರಮಗಳ ಹೊರತಾಗಿಯೂ ಅಗ್ನಿ ಅವಘಡ ಮುಂದು ವರಿದಿರುವುದು ಆತಂಕಕ್ಕೆ ಕಾರಣವಾಗಿದೆ. 

Advertisement

ಇಪ್ಪತ್ತು ವರ್ಷಗಳಿಗೆ ಹೋಲಿಸಿದರೆ ಕಳೆದ ನವೆಂಬರ್‌ನಿಂದ ಇದುವರೆಗೆ ಅತೀ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ನಡೆದಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದೆ. ಅಮೆರಿಕದ “ನಾಸಾ’ ಉಪಗ್ರಹದಿಂದ ಕಾಡ್ಗಿಚ್ಚು ಕಾಣಿಸುವ ಬಗ್ಗೆ ಮುನ್ನೆಚ್ಚರಿಕೆ ಸಂದೇಶ ರವಾನೆಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೂ ಬೆಂಕಿ ಅವಘಡ ಮರುಕಳಿಸುತ್ತಿರುವುದು ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ರಾಜ್ಯ ಸರಕಾರ ಕಾಡ್ಗಿಚ್ಚು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಡ್ಗಿಚ್ಚು ತಡೆಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಲು ಮುಂದಾ ಗುತ್ತಿಲ್ಲವೆಂಬ ಮಾತು ಕೇಳಿಬರುತ್ತಿದೆ. ಪರಿಸರ ಸಚಿವಾಲಯದ ವ್ಯಾಪ್ತಿಗೆ ಬರುವ ಫಾರೆಸ್ಟ್‌ ಸರ್ವೆ ಆಫ್ ಇಂಡಿಯಾ ಕಳೆದ ಒಂದೂವರೆ ತಿಂಗಳಿಂದ ಕರ್ನಾಟಕ ಸಹಿತ  ದೇಶದಲ್ಲಿ ಕಾಡ್ಗಿಚ್ಚು ಬಗ್ಗೆ ಕ್ಷಣಮಾತ್ರದಲ್ಲಿ ನಿಖರ ಮಾಹಿತಿ ರವಾನಿಸುವ ತಂತ್ರಜ್ಞಾನ
ವನ್ನು ಅಳವಡಿಸಿಕೊಂಡಿದೆ. 

ಈ ಸಂಸ್ಥೆಯು “ನಾಸಾ’ ಉಪಗ್ರಹದ ಮೂಲಕ ಕಾಡಿನಲ್ಲಿ ಬೆಂಕಿ ಕಾಣಿಸಿದ ಕೆಲವೇ ನಿಮಿಷಗಳಲ್ಲಿ ಸಂಬಂಧಪಟ್ಟವರಿಗೆ ಆ ಬಗ್ಗೆ ಮಾಹಿತಿ ರವಾನಿಸುತ್ತದೆ. ಹೀಗಾಗಿ, ಬಂಡೀಪುರ, ನಾಗರಹೊಳೆ, ಕುದುರೆಮುಖ, ಪಶ್ಚಿಮ ಘಟ್ಟ  ಸಹಿತ ಕರ್ನಾಟಕದ ಯಾವುದೇ ಅರಣ್ಯ ಪ್ರದೇಶದಲ್ಲಿ ಬೆಂಕಿ ಜ್ವಾಲೆ ಕಾಣಿಸಿಕೊಂಡ ತತ್‌ಕ್ಷಣ ಆ ಕುರಿತು ಮುನ್ನೆಚ್ಚರಿಕೆ ಸಂದೇಶ ಪಡೆದುಕೊಂಡು ಬೆಂಕಿಯಿಂದ ಅರಣ್ಯ ಸಂಪತ್ತು ರಕ್ಷಿಸುವ ವ್ಯವಸ್ಥೆ ನಮ್ಮ ಸರಕಾರದ ಬಳಿ ಈಗ ಲಭ್ಯವಿದೆ. 

 ಈ ರೀತಿ ಕಾಡಿನ ಬೆಂಕಿ ಬಗ್ಗೆ ಮುನ್ನೆಚ್ಚರಿಕೆ ಸಂದೇಶ ಪಡೆಯುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆಯೇ ಹೊರತು, ಆ ಮಾಹಿತಿ ಆಧರಿಸಿ ಪರಿಣಾಮ ಕಾರಿಯಾಗಿ ಅಪಾಯ ತಪ್ಪಿಸುವುದಕ್ಕೆ ಕಾರ್ಯ ಪ್ರವೃತ್ತವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹಲವು ವರ್ಷಗಳಿಂದ  ಚಾರಣ ನಡೆಸುತ್ತಿರುವ ಪರಿಸರವಾದಿ ದಿನೇಶ್‌ ಹೊಳ್ಳ ಪ್ರಕಾರ, “ನನ್ನ ಅನುಭವದಲ್ಲಿ ನವೆಂಬರ್‌ನಲ್ಲಿ ಕಾಡಿಗೆ ಬೆಂಕಿ ಬಿದ್ದಿರುವುದನ್ನು ನೋಡಿದ್ದು ಇದೇ ಮೊದಲು. ನದಿ ಮೂಲಗಳು ಬತ್ತಿ ಹೋಗು ತ್ತಿರುವುದೇ ಅದಕ್ಕೆ ಮುಖ್ಯ ಕಾರಣ. ಬಹಳಷ್ಟು ಕಡೆ ನೀರಿನ ಮೂಲ ಬತ್ತಿರುವುದರಿಂದ ಕಾಡು ಅಕ್ಷರಶಃ ಒಣಗಿ ನಿಂತಿದೆ. ಹೀಗಾಗಿ, ಬೆಂಕಿ ಕಿಡಿ ಕಾಣಿಸಿಕೊಂಡ ತತ್‌ಕ್ಷಣ ಅದು ಇಡೀ ಕಾಡನ್ನು ವ್ಯಾಪಿಸುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಳೆನೀರು ಹೊಳೆ, ಕೆಂಪುಹೊಳೆ, ಮೃತ್ಯುಂಜಯ ಹೊಳೆ, ಕುಮಾರಧಾರಾ ಸಹಿತ 9 ಉಪ ನದಿಗಳಲ್ಲಿ ಈ ಬಾರಿ ನೀರಿನ ಪ್ರಮಾಣ ತೀರಾ ಕಡಿಮೆಯಾಗಿದೆ. ಆದರೆ, ಸರಕಾರ ಮಾತ್ರ ಈ ನದಿ ಮೂಲಗಳ ಸಂರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ.

Advertisement

ಬಂಡೀಪುರ, ನಾಗರಹೊಳೆ, ಕುದುರೆಮುಖ, ಕೊಲ್ಲೂರು, ಕೊಡಚಾದ್ರಿ ಅರಣ್ಯ ಪ್ರದೇಶ ದಲ್ಲಿಯೂ ನೀರಿನ ಮೂಲ ಕಣ್ಮರೆಯಾಗುತ್ತಿದೆ. ಅಭಯಾರಣ್ಯದಲ್ಲಿ ಪ್ರಾಣಿಗಳಿಗೆ ನೀರು ಕುಡಿ ಯುವುದಕ್ಕೆ ಕಾಡು ಮಧ್ಯೆ ಹೊಂಡಗಳನ್ನು ಮಾಡ ಲಾಗಿದ್ದು,  ಅಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತದೆ. ಕಾಡಿಗೆ ಬೆಂಕಿ ಬಿದ್ದಾಗ, ಆ ನೀರನ್ನು ಬೆಂಕಿ ಶಮನ ಗೊಳಿಸುವುದಕ್ಕೂ ಬಳಸಿಕೊಳ್ಳಲಾಗುವುದು. ಆದರೆ, ಈ ಬಾರಿ, ಬೆಂಕಿ ನಂದಿಸುವುದಿರಲಿ, ಕಾಡುಪ್ರಾಣಿಗಳಿಗೆ ಕುಡಿಯುವುದಕ್ಕೂ ನೀರಿಲ್ಲ ಎಂದು ಬಂಡೀಪುರ ಅರಣ್ಯ ವಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫಾರೆಸ್ಟ್‌  ಸರ್ವೆ ಆಫ್ 
ಇಂಡಿಯಾ ನೀಡಿರುವ ಮಾಹಿತಿ ಯಂತೆ, ನಾಸಾ ಉಪಗ್ರಹ ಪ್ರತಿ ದಿನವೂ ಕರ್ನಾಟಕದಲ್ಲಿ ಎಲ್ಲೇ ಕಾಡಿನಲ್ಲಿ ಬೆಂಕಿ ಜ್ವಾಲೆ ಕಾಣಿಸಿದ ಬಗ್ಗೆ ಕಡಿಮೆ ಅಂದರೂ 50 ಬಾರಿ ಮಾಹಿತಿ ನೀಡುತ್ತಿದೆ. ಉದಾಹರಣೆಗೆ ಫೆ. 2ರಂದು ಈ ಉಪಗ್ರಹದಿಂದ ಶಿವಮೊಗ್ಗ, ಹಾಸನ, ಬಳ್ಳಾರಿ, ಕರಾವಳಿ ಸಹಿತ ಹಲವು ಅರಣ್ಯ ವೃತ್ತಗಳಲ್ಲಿ ಒಟ್ಟು 101 ಬಾರಿ ಬೆಂಕಿ ಬಿದ್ದಿರುವುದಾಗಿ ಮಾಹಿತಿ ರವಾನೆಯಾಗಿದೆ. ಅಂದರೆ, ಫೆಬ್ರವರಿ ತಿಂಗಳಲ್ಲಿ ಇಲ್ಲಿವರೆಗೆ ಒಟ್ಟು 3,663 ಬೆಂಕಿ ಆಕಸ್ಮಿಕ ಮಾಹಿತಿಯನ್ನು ಈ ಉಪಗ್ರಹ ಸೆರೆ ಹಿಡಿದಿದೆ. 

 *ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next