Advertisement

ನರೇಂದ್ರ ಮೋದಿ ಬಲಿಷ್ಠ , ಜನಸ್ನೇಹಿ ಆಡಳಿತಕ್ಕೆ 20 ವರ್ಷಗಳು!

12:04 AM Oct 07, 2021 | Team Udayavani |

ಕಳೆದ 20 ವರ್ಷಗಳ‌ಲ್ಲಿ ದೇಶಕ್ಕೆ ನರೇಂದ್ರ ದಾಮೋದರ್‌ದಾಸ್‌ ಮೋದಿ ಎಂಬ ಒಬ್ಬ ಬಲಿಷ್ಠ ನಾಯಕ ಸಿಕ್ಕಿದ್ದಾರೆಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ಒಂದು ಕೆಟ್ಟದರ ಹಿಂದೆ ಒಂದು ಒಳ್ಳೆಯದಾಗುತ್ತದೆ ಎಂಬ ಮಾತಿನಂತೆ, 2001ರಲ್ಲಿ ಗುಜರಾತ್‌ನ ಕಛ್ ಮತ್ತು ಭುಜ್‌ನಲ್ಲಿ ಘೋರ ಭೂಕಂಪ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಎಲೆಮರೆ ಕಾಯಿಯಂತಿದ್ದ ಒಬ್ಬ ಸಮರ್ಥ ನಾಯಕ ಈ ರಾಜಕೀಯ ಮುಖ್ಯವಾಹಿನಿಗೆ ಬರುವಂತಾಯಿತು. 2001ರ ಅ. 7ರಿಂದ ಶುರುವಾದ ನರೇಂದ್ರ ಮೋದಿಯವರ ಅಧಿಕಾರ ಶಕೆ, ಈ ವರ್ಷ 20 ವರ್ಷ ಪೂರೈಸಿದ್ದು, ಅವರ ಈ ಸುದೀರ್ಘ‌ ಆಡಳಿತದ ಹಿನ್ನೋಟ ಇಲ್ಲಿದೆ.

Advertisement

ಅದು 2001ರ ಜ. 26. ಸಮಯ… ಬೆಳಗ್ಗೆ 8.30. ದೇಶವೆಲ್ಲ ಗಣ­­ರಾಜ್ಯೋತ್ಸವ ದಿನಾಚರಣೆಯಲ್ಲಿ ಮುಳುಗಿತ್ತು. ರಾಷ್ಟ್ರ ರಾಜಧಾನಿ ದಿಲ್ಲಿಯ ರಾಜಪಥ್‌ನಲ್ಲಿ ಗಣರಾಜ್ಯೋತ್ಸವ ಪರೇಡ್‌ ನಡೆಯುತ್ತಿತ್ತು. ಆಗಲೇ ಬಂದೆರಗಿದ್ದು… ಆ ಘನಘೋರ ದುರಂತದ ವರದಿ.

ಗುಜರಾತ್‌ನ ಕಛ್ ಮತ್ತು ಭುಜ್‌ ಎಂಬ ಅವಳಿ ಪಟ್ಟಣಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿ, ಸುಮಾರು 20,000 ಮಂದಿ ದಾರುಣವಾಗಿ ಸಾವನ್ನಪ್ಪಿದರು. ಇಡೀ ದೇಶದಲ್ಲಿ ಸೂತಕದ ಛಾಯೆ ಆವರಿಸಿತು. ಗುಜರಾತ್‌ನಲ್ಲಂತೂ ಅಕ್ಷರಶಃ ಶ್ಮಶಾನ ಮೌನ.

ಸುದ್ದಿ ತಿಳಿದ ಕೂಡಲೇ ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಭಾಗವಹಿಸಿದ್ದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಒಡನೆಯೇ ಗುಜರಾತ್‌ಗೆ ಹೊರಟು ನಿಂತರು. ಅವರ ಹಿಂದೆಯೇ, ಅನೇಕ ಕೇಂದ್ರ ಸಚಿವರು, ಅಧಿಕಾರಿಗಳು ಗುಜರಾತ್‌ಗೆ ದೌಡಾಯಿಸಿ­ದರು. ಭೂಕಂಪಕ್ಕೀಡಾಗಿದ್ದ ಪ್ರದೇಶಗಳಲ್ಲಿ ಯಾವ ಮಟ್ಟದ ಹಾನಿ ಸಂಭವಿಸಿತ್ತೆಂದರೆ, ಕಛ್ ಮತ್ತು ಭುಜ್‌ಗಳು ಅಕ್ಷರಶಃ ಬುಡಮೇಲು ಆಗಿದ್ದವು. ರಿಕ್ಟರ್‌ ಮಾಪಕದಲ್ಲಿ 7.7ರ ತೀವ್ರತೆಯನ್ನು ದಾಖಲಿಸಿ ಸುಮಾರು 90 ಸೆಕೆಂಡ್‌ಗಳ ಕಾಲ ಕಂಪಿಸಿದ್ದ ಭೂಮಿ, ಆ ಪ್ರದೇಶದಲ್ಲಿದ್ದ ಮನೆ-ಮಠ, ಜನಜೀವನ ಎಲ್ಲವನ್ನೂ ಆಪೋಶನ ತೆಗೆದುಕೊಂಡಿತ್ತು.

ಆಗ ಗುಜರಾತ್‌ನಲ್ಲಿ ಅಧಿಕಾರದಲ್ಲಿದ್ದ ಕೇಶುಭಾಯ್‌ ಪಟೇಲ್‌ ನೇತೃತ್ವದ ಬಿಜೆಪಿ ಸರಕಾರ, ನಿರಾಶ್ರಿತರ ಪುನರ್ವಸತಿಗಾಗಿ ಸುಮಾರು 10 ಸಾವಿರ ಕೋಟಿ ರೂ. ಪರಿಹಾರವನ್ನು ಘೋಷಿಸಿತು. ಆನಂತರ 7 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಪ್ಯಾಕೇಜ್‌ ಕೂಡ ಘೋಷಣೆಯಾಯಿತು. ಆದರೆ ಪುನರ್ವಸತಿ ಮಾತ್ರ ಭಾರೀ ಮಂದಗತಿಯಲ್ಲಿ ಸಾಗಿದವು. ಕೇಶುಭಾಯ್‌ ಪಟೇಲ್‌ ಸರಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕತೊಡಗಿದರು. ಜನರ ಈ ಅಸಮಾಧಾನದ ಬಿಸಿ, ದೂರದ ದಿಲ್ಲಿಗೂ ಮುಟ್ಟಿತು. ಆಗಲೇ ಬಿಜೆಪಿ ಹೈಕಮಾಂಡ್‌ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು.

Advertisement

ಅಚಾನಕ್‌ ಆಗಿ ಒಲಿದ ಗುರುತರ ಹೊಣೆ
ಅದು 2001ರ ಅಕ್ಟೋಬರ್‌ 1. ದಿಲ್ಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿದ್ದ ಆಗಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನರೇಂದ್ರ ದಾಮೋದರ್‌ದಾಸ್‌ ಮೋದಿಯವರಿಗೆ ಪ್ರಧಾನಿ ವಾಜಪೇಯಿ ಕಚೇರಿಯಿಂದ ಕರೆಯೊಂದು ಬಂತು. ಒಡನೆಯೇ ತಮ್ಮನ್ನು ಭೇಟಿ ಮಾಡಬೇಕೆಂಬ ಅಕ್ಕರೆಯ ಕರೆಯದು. ಪ್ರಧಾನಿಯವರ ನಿವಾಸಕ್ಕೆ ಆಗಮಿಸಿದ ಮೋದಿಯವರೊಂದಿಗೆ ಉಭಯ ಕುಶಲೋಪರಿ ಮಾತುಕತೆಯಾಡಿದ ವಾಜಪೇಯಿ, “ನಿಮಗೊಂದು ಹೊಸ ಜವಾಬ್ದಾರಿ ಕೊಡುತ್ತಿದ್ದೇವೆ. ಅದನ್ನು ನಿಭಾಯಿಸುವಿರಾ’ ಎಂದು ಕೇಳಿದರು. “ನಾನು ಸಿದ್ಧ’ ಎಂಬ ಉತ್ತರ ಮೋದಿಯವರಿಂದ. ತಡ ಮಾಡದೇ ನುಡಿದ ವಾಜಪೇಯಿ, “ನಿಮ್ಮನ್ನು ಗುಜರಾತ್‌ ಮುಖ್ಯಮಂತ್ರಿಯನ್ನಾಗಿಸಲು ತೀರ್ಮಾ­ನಿ­ಸಿದ್ದೇವೆ. ಆ ಜವಾಬ್ದಾರಿ ನೀವು ಹೊರಬೇಕು. ನಿಮ್ಮ ಮೇಲಿನ ಭರವಸೆಯಿಂದ ಈ ನಿರ್ಧಾರ ಕೈಗೊಂಡಿ ದ್ದೇವೆ ಎಂದರು. ವಾಜಪೇಯಿ ಮಾತನ್ನು ಒಲ್ಲದ ಮನಸ್ಸಿನಿಂದಲೇ ಸ್ವೀಕರಿಸಿದರು ಮೋದಿ.

ಇದನ್ನೂ ಓದಿ:“ನೀಟ್‌ ಸೂಪರ್‌ ಸ್ಪೆಷಾಲಿಟಿ’ಗೆ ಸುಪ್ರೀಂ ಅಸ್ತು

ಆಯ್ಕೆಯ ಹಿಂದಿನ ಕಾರಣ
ವಾಜಪೇಯಿಯವರ ಈ ಆಗ್ರಹಕ್ಕೂ ಬಲವಾದ ಕಾರಣವಿತ್ತು. ಕಛ್ ಮತ್ತು ಭುಜ್‌ನಲ್ಲಿ ನಾಶವಾದ ಮನೆಗಳ ಪುನರ್ವಸತಿ ವಿಚಾರದಲ್ಲಿ ಕೇಶುಭಾಯ್‌ ಪಟೇಲ್‌ ಸರಕಾರದ ವೈಫ‌ಲ್ಯವನ್ನು ಹೋಗಲಾಡಿಸಿ, ಬಿಜೆಪಿಯ ಪ್ರತಿಷ್ಠೆಯನ್ನು ಮರುಸ್ಥಾಪಿಸಿದ ಹೆಗ್ಗಳಿಕೆ ಮೋದಿ­ಯವರದ್ದು. ಬಿಜೆಪಿ ಪ್ರಧಾನ ಕಾರ್ಯ ದರ್ಶಿಯಾಗಿ ಹೊಸದಿಲ್ಲಿಯಲ್ಲಿದ್ದ ಅವರು ಕಛ್ ಮತ್ತು ಭುಜ್‌ಗೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಸರಕಾರದ ಹಣದಲ್ಲಿ ಒಂದು ರೂಪಾಯಿಯೂ ವ್ಯರ್ಥವಾಗದ ರೀತಿಯಲ್ಲಿ ಭೂಕಂಪಕ್ಕೀಡಾಗಿದ್ದ ಎಲ್ಲ ಪ್ರಾಂತ್ಯವನ್ನೂ ಅಚ್ಚುಕಟ್ಟಾಗಿ ಮರು ನಿರ್ಮಿಸಿದರು. ಆಗಲೇ ಅವರು ಗುಜರಾತ್‌ ತುಂಬೆಲ್ಲ ಮಾಧ್ಯಮಗಳ ಮೂಲಕ ಗುರುತಿಸಲ್ಪಟ್ಟಿದ್ದರು. ಇದು ವಾಜಪೇಯಿ ಹಾಗೂ ಬಿಜೆಪಿ ಹೈಕಮಾಂಡ್‌ನ‌ ಮೆಚ್ಚುಗೆಗೆ ಪಾತ್ರವಾಗಿತ್ತು.

2001ರ ಅ. 7ರಂದು ಗುಜರಾತ್‌ ರಾಜಧಾನಿ ಗಾಂಧಿನಗರದ ಹೆಲಿಪ್ಯಾಡ್‌ ಮೈದಾನದಲ್ಲಿ ನಿರ್ಮಿಸಲಾಗಿದ್ದ ಬೃಹತ್‌ ವೇದಿಕೆಯಲ್ಲಿ ಮೋದಿ, ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಶುರುವಾಯಿತು ಮೋದಿ ಶಕೆ!

ಅಭಿವೃದ್ಧಿಗೆ ಮಾದರಿಯಾದ ಗುಜರಾತ್‌
ಮೂಲಸೌಕರ್ಯ, ಸಾರಿಗೆ, ಕೈಗಾರಿಕೆ, ಜಲಸಂಪನ್ಮೂಲ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಮಟ್ಟದ ಅಭಿವೃದ್ಧಿಯನ್ನು ಸಾಧಿಸಿ, ಆ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಿದ ಹೆಗ್ಗಳಿಕೆ ಮೋದಿಯವರ ಪಾಲಾಯಿತು. 2007ರ ವೈಬ್ರೆಂಟ್‌ ಗುಜರಾತ್‌ಗೆ ಚಾಲನೆ ನೀಡುವ ಮೂಲಕ ಕೋಟ್ಯಂತರ ರೂಪಾಯಿ ಬಂಡವಾಳವನ್ನು ರಾಜ್ಯಕ್ಕೆ ತಂದಿದ್ದು, 2008ರಲ್ಲಿ 113,738 ಚೆಕ್‌ ಡ್ಯಾಂಗಳ ನಿರ್ಮಾಣ, 2010ರಲ್ಲಿ 60 ಹಳ್ಳಿಗಳ ಅಂತರ್ಜಲ ಮರುಪೂರಣ ಯೋಜನೆಯ ಯಶಸ್ವಿ ಅನುಷ್ಠಾನ, 2010ರಲ್ಲಿ ಹತ್ತಿ ಉತ್ಪಾದನೆಯಲ್ಲಿ ಗುಜರಾತ್‌ಗೆ ಅಗ್ರಸ್ಥಾನ ಬರುವಂತೆ ಮಾಡಿದ್ದು ಅವರ ಯಶಸ್ವಿ ಆಡಳಿತಕ್ಕೆ ಕೆಲವು ಉದಾಹರಣೆಗಳಷ್ಟೆ. ಅವರ ಅಧಿಕಾರಾವಧಿಯಲ್ಲಿ 2001ರಿಂದ 2007ರ ವರೆಗೆ ಗುಜರಾತ್‌ ಕೃಷಿ ವಲಯ ಶೇ. 9.6ರಷ್ಟು ಅಭಿವೃದ್ಧಿಯಾಗಿದ್ದೂ ಅವರ ಹೆಚ್ಚುಗಾರಿಕೆಗಳಲ್ಲೊಂದು. 2008ರಲ್ಲಿ ಟಾಟಾ ಮೋಟಾರ್ಸ್‌ ಕಂಪೆನಿಗೆ ಗುಜರಾತ್‌ನಲ್ಲಿ ಭೂಮಿ ನೀಡಿ, ರತನ್‌ ಟಾಟಾರ ಕನಸಿನ ಟಾಟಾ ನ್ಯಾನೋ ಕಾರಿನ ಉತ್ಪಾದನೆಗೆ ಚಾಲನೆ ನೀಡಿದ್ದು ಅವರ ಕೈಗಾರಿಕ ಬೆಳವಣಿಗೆ ಬಗ್ಗೆ ಇದ್ದ ಪ್ರೀತಿಗೆ ಸಾಕ್ಷಿ. ಕೃಷಿಗೆ ಬಳಸುವ ವಿದ್ಯುತ್ತನ್ನು ಜನಸಾಮಾನ್ಯರ ವಿದ್ಯುತ್‌ ವ್ಯವಸ್ಥೆಯಿಂದ ಬೇರ್ಪಡಿಸಿದ್ದು ಅವರ ಹೊಸತನದ ದೃಷ್ಟಿಕೋನವುಳ್ಳ ಆಡಳಿತ ವೈಖರಿಗೆ ಉದಾಹರಣೆ.

2013ರಲ್ಲಿ ಗುಜರಾತ್‌, ವಿಶ್ವಬ್ಯಾಂಕ್‌ನಿಂದ ಆರ್ಥಿಕ ಸ್ವಾತಂತ್ರ ಗಳಿಸಿದ ರಾಜ್ಯವೆಂಬ ಹಿರಿಮೆ ಗಳಿಸಿತು. ಮತ್ತೊಂದೆಡೆ, ಮೋದಿ ಕೂಡ ರಾಷ್ಟ್ರೀಯ ಹಿಂದುತ್ವ ಪರಿಕಲ್ಪನೆಯ ರೂವಾರಿಯಾಗಿ ಜನರಲ್ಲಿ ಗಟ್ಟಿಯಾಗಿ ಬೇರೂರಿದರು.

ಮೊದಲ ಅವಧಿಯಲ್ಲೇ ಭರ್ಜರಿ ಬ್ಯಾಟಿಂಗ್‌
ಕೇಂದ್ರದಲ್ಲಿ ಮೋದಿ ಶಕೆ ಶುರುವಾದ ನಂತರ, ಆಡಳಿತಾತ್ಮಕವಾಗಿ ಹಲವು ಬದಲಾವಣೆಗಳಾಗಿವೆ. ಎಲ್ಲಕ್ಕೂ ಮೊದಲು, ಸರಕಾರಿ ಅಧಿಕಾರಿಗಳು, ಸಚಿವರು ಈವರೆಗೆ ಹೊಂದಿದ್ದ ಅಭಿವೃದ್ಧಿಯ ಪರಿಕಲ್ಪನೆ, ಆರ್ಥಿಕ ಬೆಳವಣಿಗೆಯ ಪರಿಕಲ್ಪನೆ ಬದಲಾಗಿದೆ. ಸರಕು ಮತ್ತು ಸೇವಾ ತೆರಿಗೆ, ಮೇಕ್‌ ಇನ್‌ ಇಂಡಿಯಾ, ಉಡಾನ್‌, ಸ್ವಚ್ಛ ಭಾರತ, ಜನಧನ್‌ ಯೋಜನೆ, ಸ್ಮಾರ್ಟ್‌ ಸಿಟಿ, ಮುದ್ರಾ ಯೋಜನೆಯಂಥ ಪರಿಕಲ್ಪನೆಗಳನ್ನು ಜಾರಿಗೊಳಿಸಿದರು. ಆರ್ಥಿಕ ವ್ಯವಹಾರ ಗಳನ್ನು ಸರಳಗೊಳಿ­ಸಲು ಡಿಜಿಟಲ್‌ ಪಾವತಿಗೆ ಒತ್ತು ಕೊಟ್ಟಿದ್ದು ನಿಜಕ್ಕೂ ಉತ್ತಮವಾದ ನಿರ್ಧಾರ ಎಂಬುದು ಕೊರೊನಾ ನಿರ್ಬಂಧದ ಕಾಲಘಟ್ಟದಲ್ಲಿ ಸಾಬೀತಾಯಿತು.

ಸ್ವಾತಂತ್ರ್ಯ ಬಂದಾಗಿನಿಂದಲೂ ಭಾರತ ಸರಕಾರದ ಭಾಗವಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿದ್ದು, ಬ್ರಿಟಿಷರ ಕಾಲದಿಂದಲೂ ಪ್ರತ್ಯೇಕವಾಗಿ ಮಂಡನೆಯಾ­ಗುತ್ತಿದ್ದ ರೈಲ್ವೇ ಬಜೆಟ್ಟನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಿದ್ದು ಅವರ ಹೊಸತನದ ಚಿಂತನೆಗೆ ಸಾಕ್ಷಿ.

ಜನಪ್ರಿಯ ಪ್ರಧಾನಿ, ಬಲಿಷ್ಠ ಭಾರತ
2012ರ ಹೊತ್ತಿಗೆ ಕೇಂದ್ರದಲ್ಲಿದ್ದ ಯುಪಿಎ ವಿರುದ್ಧ ಜನರ ಅಸಮಾಧಾನ ನಿಧಾನವಾಗಿ ಹೆಚ್ಚಾಗುತ್ತಲೇ ಇತ್ತು. ಆ ಸರಕಾರದ ಹಲವು ಹಗರಣಗಳು ಕಾಂಗ್ರೆಸ್‌ನ ಇಮೇಜ್‌ಗೆ ಹೊಡೆತ ನೀಡಿತ್ತು. ಆಗಲೇ ದೇಶಕ್ಕೆ ಒಬ್ಬ ಶಕ್ತಿಶಾಲಿ, ಶುದ್ಧಹಸ್ತ, ಅಭಿವೃದ್ಧಿಪರ ನಾಯಕ ಬೇಕು ಎಂಬ ಅಭಿಪ್ರಾಯಗಳು ಮೂಡತೊಡಗಿದವು. ಆಗ ಎಲ್ಲರ ಚಿತ್ತ ಮೋದಿ ಕಡೆ ತಿರುಗಿತು. ಹಾಗಾಗಿ, 2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆಯಾದರು. ಅವರ ವರ್ಚಸ್ಸಿನಿಂದಾಗಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂತು.

ದಿಟ್ಟ ನಿರ್ಧಾರಗಳ ಹರಿಕಾರ
ಗುಜರಾತ್‌ನ ಮುಖ್ಯಮಂತ್ರಿಯಾಗಿ ಆಕಸ್ಮಿಕವಾಗಿ ಅಧಿಕಾರಕ್ಕೇರಿದ ಮೋದಿ, ಮುಂದೆ ಯಾರೂ ಎಣಿಸದ ರೀತಿಯಲ್ಲಿ ಆ ರಾಜ್ಯದ ಮಹಾನ್‌ ನಾಯಕರಾಗಿ ಬೆಳೆದುಬಿಟ್ಟರು. ಅವರ ವರ್ಚಸ್ಸು, ಚಾಣಾಕ್ಷತೆಗಳನ್ನು ಕುಂದಿಸಲು ವಿಪಕ್ಷಗಳು ನಡೆಸಿದ ಯಾವುದೇ ತಂತ್ರಗಾರಿಕೆ ಫ‌ಲ ನೀಡಲಿಲ್ಲ. ಗುಜರಾತ್‌ ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ಕೆಲವು ದಿಟ್ಟ ನಿರ್ಧಾರಗಳು ಖುದ್ದು ಸಂಘಪರಿವಾರವನ್ನೇ ಕನಲುವಂತೆ ಮಾಡಿದ್ದು ಸುಳ್ಳಲ್ಲ! 2002ರಲ್ಲಿ ಗುಜರಾತ್‌ನಲ್ಲಿ ಸುಮಾರು 200 ಅಕ್ರಮ ದೇವಾಲಯಗಳನ್ನು ನೆಲಸಮ ಮಾಡುವ ಮೂಲಕ ಸಂಘ ಪರಿವಾರದ ಪ್ರಮುಖ ಸಂಘ ಟನೆಯಾದ ಆರ್‌ಎಸ್‌ಎಸ್‌, ವಿಎಚ್‌ಪಿಯನ್ನೇ ದಂಗಾಗಿಸಿದ್ದರು.

ಎರಡನೇ ಅವಧಿಯಲ್ಲಿನ ಜನಪ್ರಿಯ ಯೋಜನೆ, ನಿರ್ಧಾರ
2019 ಮೇ 30ರಂದು ನರೇಂದ್ರ ಮೋದಿಯವರ ಸರಕಾರ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತಾನು ಹಿಂದೆ ನೀಡಿದ್ದ ವಾಗ್ಧಾನಗಳನ್ನು ಪೂರೈಸುವತ್ತ ಹೆಜ್ಜೆಯಿಟ್ಟಿತು. ಆ ನಿಟ್ಟಿನಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದದ್ದು, ರಾಮಮಂದಿರ ವಿವಾದದ ಇತ್ಯರ್ಥ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಚಾಲನೆ, ತ್ರಿವಳಿ ತಲಾಖ್‌ ರದ್ದತಿ ಮುಂತಾದ ಕ್ರಮ ಕೈಗೊಳ್ಳುವ ಹೊತ್ತಿಗೆ ದೇಶ ಕೊರೊನಾಕ್ಕೆ ತುತ್ತಾಯಿತು. ಇದು ಮೋದಿ ಸರಕಾರಕ್ಕೆ ಒಂದೊದಗಿದ ಅತೀ ದೊಡ್ಡ ಸವಾಲು. ಅದನ್ನು ಯಶಸ್ವಿಯಾಗಿ ನಿಭಾಯಿಸಿ, ಲಸಿಕೆ ಪೂರೈಕೆ ಮಾತ್ರವಲ್ಲ, ದೇಶೀಯ ಮಟ್ಟದಲ್ಲೇ ಲಸಿಕೆ ಉತ್ಪಾದಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ.

ಸಾರಿಗೆ, ಮೂಲಸೌಕರ್ಯ: ಹೆದ್ದಾರಿ ವಿಭಾಗದಲ್ಲಿ 1 ಲಕ್ಷದ 32 ಸಾವಿರ ಕಿ.ಮೀ. ದೂರದ ರಸ್ತೆ ಮೇಲ್ದರ್ಜೆಗೇರಿವೆ. ಉಡಾನ್‌ ಯೋಜನೆ ಮೂಲಕ ಕಡಿಮೆ ವೆಚ್ಚದ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಜಲಮಾರ್ಗಗಳ ಬಳಕೆಗೆ ಯೋಜನೆ ರೂಪಿಸಲಾಗಿದೆ. ಅಟಲ್‌ ಸುರಂಗ, ವಿಶ್ವದ ಅತಿ ಎತ್ತರದ ಚೆನಾಬ್‌ ಸೇತುವೆ, ಮುಂಬಯಿ-ಪುಣೆ ನಡುವಿನ ಎಕ್ಸ್‌ಪ್ರೆಸ್‌ ಹೈವೇ, ಜೊಜೀಲಾ ಸುರಂಗ ಯೋಜನೆಗಳು ದೇಶದ ಎಂಜನಿಯರ್‌ಗಳ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿವೆ. ಕಳೆದ ಐದು ವರ್ಷಗಳಲ್ಲಿ 813 ಹೊಸ ರೈಲುಗಳ ಸೇವೆ ಕಲ್ಪಿಸಲಾಗಿದೆ. ಜಲಜೀವನ ಮಿಷನ್‌ನಡಿ 5 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಆಸ್ತಿಪಾಸ್ತಿ ಹಕ್ಕುಗಳ ದಾಖಲೆ ಪಡೆಯಲು ಸರಳವಾಗಿಸಲು ಸ್ವಾಮಿತ್ವ ಯೋಜನೆ ತರಲಾಗಿದೆ.
ಕೃಷಿ: ರೈತರಿಗೆ ಪಿಂಚಣಿ ಯೋಜನೆ, ಮೂರು ಕೃಷಿ ಕಾಯ್ದೆಗಳು, ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ವೋಕಲ್‌ ಫಾರ್‌ ಲೋಕಲ್‌ಗೆ ಕರೆ ನೀಡಲಾಗಿದೆ.

ರಕ್ಷಣ ಇಲಾಖೆ: ರಕ್ಷಣ ಸಾಮಗ್ರಿಗಳ ಉತ್ಪಾದನ ಕ್ಷೇತ್ರದಲ್ಲಿ ಇದ್ದ ವಿದೇಶಿ ಹೂಡಿಕೆಯನ್ನು ಶೇ. 49ರಿಂದ ಶೇ. 74ಕ್ಕೆ ಹೆಚ್ಚಿಸಿ, ಭಾರತದಲ್ಲೇ ರಕ್ಷಣ ಸಾಮಗ್ರಿ ಉತ್ಪಾದನೆಗೆ ಅನುವು ಮಾಡಿಕೊಡಲಾಗಿದೆ. ರಫೇಲ್‌ ಯುದ್ಧ ವಿಮಾನಗಳನ್ನು ತಂದು ರಕ್ಷಣ ಪಡೆಗಳ ತಾಕತ್ತು ಹೆಚ್ಚಿಸಲಾಗಿದೆ.

ಹಣಕಾಸು: ಹಲವಾರು ರಾಷ್ಟ್ರೀಯ ಬ್ಯಾಂಕ್‌ಗಳ ವಿಲೀನ, ಜಿಎಸ್‌ಟಿ ಜತೆಗೆ ದೂರಸಂಪರ್ಕ ಕ್ಷೇತ್ರದ ಕಂಪೆನಿಗಳು ಪಾವತಿಸಬೇಕಿದ್ದ ಕೋಟ್ಯಂತರ ಎಜಿಆರ್‌ ಶುಲ್ಕ ಪಾವತಿಗೆ 4 ವರ್ಷಗಳ ಮೊರಾಟೋರಿಯಂ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಶೇ. 100ರಷ್ಟು ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕ್ರೀಡೆ: ಕ್ರೀಡಾ ಕ್ಷೇತ್ರಕ್ಕೆ ಒಲಿಂಪಿಕ್‌ ಪೋಡಿಯಂ ಸ್ಕೀಂ ಮೂಲಕ ಕ್ರೀಡಾಳುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಪಡೆಯಲು, ಉನ್ನತ ದರ್ಜೆಯ ಕ್ರೀಡಾ ಪರಿಕರಗಳನ್ನು ಕೊಳ್ಳಲು, ತಮ್ಮ ತರಬೇತಿ ಸಂಬಂಧಿತ ಖರ್ಚು ವೆತ್ಛಗಳನ್ನು ನಿರ್ವಹಿಸಲು ಬೇಕಾದ ಧನಸಹಾಯ ನೀಡಲಾಗಿದ್ದು, ಅದರ ಫ‌ಲವನ್ನು ಇತ್ತೀಚೆಗಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾವು ಕಂಡಿದ್ದೇವೆ. ಮಣಿಪುರದಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಿ ಆ ಭಾಗದ ಜನರ ಕ್ರೀಡಾಳುಗಳಿಗೆ ಸಹಾಯ ಮಾಡಲಾಗಿದೆ. ಖೇಲ್‌ ರತ್ನ ಪ್ರಶಸ್ತಿಗೆ ಧ್ಯಾನ್‌ಚಂದ್‌ ಹೆಸರು ಇಡಲಾಗಿದೆ.

ಶಿಕ್ಷಣ ಕ್ಷೇತ್ರ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗಿದೆ. ಇನ್ನು, ಒಂದೇ ಆಡಳಿತದಡಿ ಉನ್ನತ ಶಿಕ್ಷಣ, ವಿದೇಶಿ ವಿವಿಗಳಿಗೆ ಭಾರತದಲ್ಲಿ ತಮ್ಮ ಶಾಖೆ ತೆರೆಯಲು ಅವಕಾಶ, ಐಐಟಿಗಳಿಗೂ ಬಹು ವಿಷಯ ವ್ಯಾಸಂಗ ನಿಯಮ ಅಳವಡಿಕೆಯಂಥ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಎಂಜಿನಿಯರಿಂಗ್‌ ಕಲಿಯಲು ಅವಕಾಶ ಕಲ್ಪಿಸಲಾಗಿದೆ.

ಇವಿಷ್ಟೇ ಅಲ್ಲದೆ ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ ಸೇವೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳಾಗಿವೆ. ಚೀನ, ಪಾಕಿಸ್ಥಾನಕ್ಕೂ ದಿಟ್ಟ ಉತ್ತರ ನೀಡಲಾಗಿದೆ. ವಿಶ್ವ ಮಟ್ಟದಲ್ಲಿ ಜಿ-27, ಕ್ವಾಡ್‌ನ‌ಂಥ ಒಕ್ಕೂಟ ಗಳಲ್ಲಿ, ತನ್ನ ಜವಾಬ್ದಾರಿಯನ್ನು ಭಾರತ ಅಚ್ಚುಕಟ್ಟಾಗಿ ನಿಭಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next