ಬೆಂಗಳೂರು: ಚುನಾವಣೆಯ ಈ ಹೊತ್ತಿನಲ್ಲಿ ಬಿಜೆಪಿ ಬಿಟ್ಟು ಹೋಗುವವರಿಗೆ ಮುಂದಿನ 20 ವರ್ಷದ ತನಕ ಬಿಜೆಪಿ ಬಾಗಿಲು ಮುಚ್ಚಿರಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಬಿಜೆಪಿಗೆ ನಷ್ಟವಿಲ್ಲ. ನಮ್ಮದು ಕಾರ್ಯಕರ್ತ ಆಧಾರಿತ ಪಕ್ಷ. ಹೊಸ ಪೀಳಿಗೆಗೆ ಅವಕಾಶ ನೀಡುವ ಪಕ್ಷ. ಆದ್ದರಿಂದ ಪಕ್ಷ ಬಿಟ್ಟು ಹೋದವರನ್ನು ಮತ್ತೆ ವಾಪಸ್ ಕರೆಸಿಕೊಳ್ಳುವ ಅಗತ್ಯ ನಮಗಿಲ್ಲ ಎಂದು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ಲಕ್ಷ್ಮಣ ಸವದಿ ದುಡುಕಿನ ತೀರ್ಮಾನ ಕೈಗೊಂಡಿದ್ದಾರೆ. ಅವರದ್ದು ಸ್ವಾರ್ಥಪೂರಿತ ನಿರ್ಧಾರ. ಚುನಾವಣೆಯಲ್ಲಿ ಸೋತಿದ್ದ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಪಕ್ಷದ ಕೋರ್ ಕಮಿಟಿ, ಚುನಾವಣ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಆದರೂ ಅವರು ಪಕ್ಷ ತೊರೆದಿದ್ದಾರೆ ಎಂದರು.
ಲಕ್ಷ್ಮಣ ಸವದಿ ಅವರು ಭವಿಷ್ಯವಿಲ್ಲದ, ಜಗಳದಿಂದ ಕೂಡಿರುವ ಕಾಂಗ್ರೆಸ್ ಸೇರಿದ್ದಾರೆ. ಅವರು ಪಶ್ಚಾತ್ತಾಪ ಪಡಲಿದ್ದಾರೆ. ಅವರು ಇನ್ನು ಹತ್ತು ವರ್ಷ ಆದರೂ ರಾಹುಲ್ ಗಾಂಧಿ ಅವರ ಮುಖ ನೋಡುತ್ತಾರೋ, ಇಲ್ಲವೋ ಎಂದು ವ್ಯಂಗ್ಯವಾಡಿದರು.
ಮೀಸಲಾತಿ ಸಮರ್ಥ ವಾದ
ಸರಕಾರದ ಮೀಸಲಾತಿ ನೀತಿ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ಎತ್ತಿರುವ ಬಗ್ಗೆ ಪ್ರಶ್ನಿಸಿದಾಗ, ನಮಗೆ ನಮ್ಮ ತೀರ್ಮಾನದ ಬಗ್ಗೆ ದೃಢ ವಿಶ್ವಾಸವಿದೆ. ನ್ಯಾಯಾಲಯದಲ್ಲಿ ನಾವು ಸಮರ್ಥವಾಗಿ ನಮ್ಮ ವಾದ ಮಂಡಿಸಲಿದ್ದೇವೆ ಎಂದು ಹೇಳಿದರು.