ಉತ್ತರ ಪ್ರದೇಶ: ವರದಕ್ಷಿಣೆಯ ಕಿರುಕುಳ ನೀಡಿರುವುದು ಮಾತ್ರವಲ್ಲದೆ ಮೊಬೈಲ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ದ ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ 20 ವರ್ಷ ವಯಸ್ಸಿನ ಮಹಿಳೆಯೊಬ್ಬರು ತನ್ನ ಗಂಡ ವರದಕ್ಷಿಣೆಯ ಕಿರುಕುಳವನ್ನು ನೀಡುತ್ತಿದ್ದಾನೆ ಹಾಗೂ ವಿದೇಶದಿಂದಲೇ ಮೊಬೈಲ್ ಮೂಲಕ ತ್ರಿವಳಿ ತಲಾಕ್ ನೀಡಿದ್ದಾನೆ ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಹುದ್ದೆಯನ್ನೇ ತಿರಸ್ಕರಿಸಿ ಬಂದವರು ನಾವು, ಮಂತ್ರಿ ಸ್ಥಾನದ ಆಸೆಯಿಲ್ಲ: ಕುಮಾರಸ್ವಾಮಿ
ಈಕೆ ಮೂರು ವರ್ಷಗಳ ಹಿಂದೆ ಖುಷಿನಗರ್ ನಿವಾಸಿಯನ್ನು ವಿವಾಹವಾಗಿದ್ದರು. ಇವರಿಬ್ಬರಿಗೆ ಒಂದು ಗಂಡು ಮಗುವಿದೆ. ಗಂಡ ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಮಹಿಳೆ ದೂರಿನಲ್ಲಿ, ತನ್ನ ಪತಿಯ ಸಹೋದರರೂ ಕೂಡಾ ವರದಕ್ಷಿಣೆ ನೀಡುವಂತೆ ತನ್ನನ್ನು ಪೀಡಿಸಿ ಹಲ್ಲೆ ಮಾಡಿದ್ದರು ಹಾಗೂ ಪತಿಯ ಸಹೋದರನೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ್ದ ಎಂದು ತಿಳಿಸಿದ್ದಾಳೆ.
ಈ ಕುರಿತಾಗಿ ಮಹಿಳೆಯು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.