ಯಲಬುರ್ಗಾ: ವಿಷಯುಕ್ತ ಬೆಂಡೆಕಾಯಿ ಚಿಗುರು ತಿಂದು 20 ಕುರಿಗಳು ಸಾವಿಗೀಡಾದ ಘಟನೆ ತಾಲೂಕಿನ ಜಿ. ವೀರಾಪೂರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆ ಪಶು ವೈದ್ಯರು, ಸಿಬ್ಬಂದಿ ಧಾವಿಸಿ, ಬೆಂಡೆ ಬೆಳೆ (ಚಿಗುರು) ತಿಂದು ನರಳುತ್ತಿದ್ದ ಕುರಿಗಳಿಗೆ ರಾತ್ರಿ 10 ಗಂಟೆಯವರೆಗೂ ಚಿಕಿತ್ಸೆ ನೀಡಿ ಸುಮಾರು 70 ಕುರಿಗಳನ್ನು ಬದುಕಿಸಿದ್ದಾರೆ. ಇನ್ನೂ 20 ಕುರಿ ಮೃತಪಟ್ಟಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ನೂರಕ್ಕೂ ಹೆಚ್ಚು ಕುರಿಗಳಿದ್ದ ಹಿಂಡನ್ನು ಕಾಯುತ್ತಿದ್ದ ಕುರಿಗಾಯಿಗಳ ಮಕ್ಕಳು ಈ ಬೆಳೆ ಚಿಗುರು ವಿಷವಿರುತ್ತದೆ ಎಂಬ ಅರಿವು ಇಲ್ಲದೆ ಮೇಯಿಸಿದ್ದರಿಂದ ಕುರಿಗಳು ಸಾವಿಗೆ ಕಾರಣವಾಗಿದೆ ಎನ್ನುತ್ತಾರೆ ವೈದ್ಯರು.
ಹೊಳೆಯಪ್ಪ ಬಾವಿಯವರ 3 ಕುರಿ, ರಾಮಣ್ಣ ಇನಾಮತಿ 3, ಶರಣಪ್ಪ ಕೊಂಗಿ 8, ಮರಿಯಪ್ಪ ಹರಿಜನ 1, ಫಕ್ಕೀರಪ್ಪ ಹರಿಜನ 5 ಕುರಿಗಳು ಸೇರಿ ಒಟ್ಟು 20 ಕುರಿಗಳು ಮೃತಪಟ್ಟಿವೆ. ಮೃತಪಟ್ಟ ಕುರಿಗಳ ದೇಹದ ಭಾಗವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ತಕ್ಷಣ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಗುವುದು ಜೊತೆಗೆ ಮೇಲಾ ಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಪಶು ಇಲಾಖೆ ವೈದ್ಯ ಪ್ರಕಾಶ ಚೂರಿ ತಿಳಿಸಿದರು.
ನಮಗೆ ಬೀಜೋತ್ಪಾದನೆಯ ಬೆಂಡೆ ಬೀಜಗಳನ್ನು ತಿಂದರೆ ಕುರಿ ಸಾಯುತ್ತವೆ ಎಂದು ತಿಳಿದಿರಲಿಲ್ಲ. ಕುರಿ ಸಾವನ್ನಪ್ಪಿರುವುದರಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ. ಸರ್ಕಾರ ಪರಿಹಾರ ನೀಡಿ ನಮ್ಮನ್ನು ಕಾಪಾಡಬೇಕು ಎಂದು ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದು, ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ್ ಶ್ರೀಶೈಲ್ ತಳವಾರ, ಸಿಪಿಐ ಎಂ. ನಾಗರಡ್ಡಿ, ಪಶು ವೈದ್ಯಾಧಿಕಾರಿಗಳು, ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಭಜಂತ್ರಿ ಭೇಟಿ ನೀಡಿ ಕುರಿಗಾಹಿಗಳಿಗೆ ಧೈರ್ಯ ತುಂಬಿದರು.
ಅನುಗ್ರಹ ಯೋಜನೆ ಆದೇಶ ನೀಡಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಕುರಿಗಾಹಿಗಳಿಗೆ ಅನುಗ್ರಹ ಯೋಜನೆ ಘೋಷಿಸಿದ್ದಾರೆ. ಆದರೆ ಇದುವರೆಗೂ ಪಶು ಇಲಾಖೆಯ ವೈದ್ಯರಿಗೆ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಇದರಿಂದ ಕುರಿಗಳು ಮೃತಪಟ್ಟರೆ ಭಾವಚಿತ್ರ ತೆಗೆದು ವರದಿ ತಯಾರಿಸುತ್ತಿದ್ದರು. ಇದೀಗ ಇಲ್ಲ ಎಂದು ಹೇಳುತ್ತಿದ್ದಾರೆ. ಶೀಘ್ರದಲ್ಲಿಯೇ ಆದೇಶ ನೀಡಬೇಕು ಎಂಬುದು ಕುರಿಗಾಹಿಗಳ ಆಗ್ರಹವಾಗಿದೆ.