ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಕೋವಿಡ್ ರಣಕೇಕೆ ಮುಂದುವರಿದಿದ್ದು, ರವಿವಾರ ಮತ್ತೆ 20 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ತೀವ್ರ ಉಸಿರಾಟದ ಹಿನ್ನೆಲೆಯುಳ್ಳ ಮೂವರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 370ಕ್ಕೆ ಏರಿಕೆ ಆದಂತಾಗಿದೆ.
ರವಿವಾರ ಜಿಲ್ಲೆಯ ಔರಾದ ತಾಲೂಕು ಏಕಂಬಾದಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಹೊಸ ಸೋಂಕಿತ 20 ಜನರಲ್ಲಿ 13 ಜನ ಮಹಾರಾಷ್ಟ್ರದ ಸಂಪರ್ಕ ಹೊಂದಿದ್ದರೆ, ಮೂವರು ಉಸಿರಾಟ ತೊಂದರೆ ಹಿನ್ನೆಲೆ ಸೋಂಕು ಒಕ್ಕರಿಸಿದೆ. ಇನ್ನುಳಿದವರಲ್ಲಿ ಮೂವರು ಸೋಂಕಿತರ ಸಂಪರ್ಕದಿಂದ ಮತ್ತು ಇನ್ನೊಬ್ಬರು ಕುವೈತ್‌ನಿಂದ ಹಿಂದುರಿಗಿದಕ್ಕೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೇಟಿನ್ ತಿಳಿಸಿದೆ.
ಒಟ್ಟು 20 ಸೋಂಕಿತರಲ್ಲಿ ಔರಾದ ತಾಲೂಕು ಏಕಂಬಾ ಗ್ರಾಮದ 8, ಬಸವಕಲ್ಯಾಣ ತಾಲೂಕು ತಡೋಳಾದ 3, ಉಮಾಪುರ ಮತ್ತು ಸಸ್ತಾಪುರದ ತಲಾ 1 ಸೇರಿ 5 ಕೇಸ್, ಕಮಲನಗರ ತಾಲೂಕು ಬೆಳಕುಣಿ ಗ್ರಾಮದ 2, ಚಿಟಗುಪ್ಪ ಪಟ್ಟಣದ 2, ಭಾಲ್ಕಿ ತಾಲೂಕು ಆಳಂದಿ ಮತ್ತು ನಾಗರಾಳ ಗ್ರಾಮದ ತಲಾ 1 ಹಾಗೂ ಬೀದರ ನಗರದ ಗುಂಪಾ ಪ್ರದೇಶದ 1 ಕೇಸ್ ಪತ್ತೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 370 ಆದಂತಾಗಿದೆ. ಇದರಲ್ಲಿ 6 ಜನರು ಮೃತಪಟ್ಟಿದ್ದರೆ, 203 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 161 ಸಕ್ರೀಯ ಪ್ರಕರಣಗಳಿವೆ.
2972 ಮಂದಿ ವರದಿ ಬಾಕಿ: ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಶಂಕಿತ 2972 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಈವರೆಗೆ 31,928 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 28,586 ಮಂದಿಯದ್ದು ನೆಗೆಟಿವ್ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 3038 ಮತ್ತು ದ್ವಿತೀಯ ಸಂಪರ್ಕಿತ 4100 ಜನರನ್ನು ಗುರುತಿಸಲಾಗಿದೆ. ಕೋವಿಡ್ ಶಂಕಿತ 176 ಜನರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೆಲ್ತ್ ಬುಲೇಟಿನ್ ತಿಳಿಸಿದೆ.