Advertisement

ಖಜಾನೆ ಲೂಟಿಗಾಗಿ ಕೈ-ಜೆಡಿಎಸ್‌ ದೋಸ್ತಿ

08:58 AM Apr 14, 2019 | Team Udayavani |

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮೈತ್ರಿ ಸರಕಾರದ ವಿರುದ್ಧದ ವಾಗ್ಧಾಳಿಯ “ಪರ್ಸೆಂಟೇಜ್‌’ ಏರಿಕೆ ಮಾಡಿದ್ದಲ್ಲದೆ, ಸಿಎಂ ಕುಮಾರ ಸ್ವಾಮಿಗೆ “ಸೈನಿಕರ ಫಿರಂಗಿ’ ಮತ್ತು ದೇವೇ ಗೌಡ, ರೇವಣ್ಣಗೆ “ಸನ್ಯಾಸ’ದ ಬಾಣ ಬೀಸಿದರು.

Advertisement

ಭತ್ತದ ನಾಡು, ಹನುಮ ಜನಿಸಿದ ಪುಣ್ಯಭೂಮಿ ಗಂಗಾವತಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮೊದಲು 10 ಪರ್ಸೆಂಟೇಜ್‌ನ ಕಾಂಗ್ರೆಸ್‌ ಸರಕಾರವಿತ್ತು. ಈಗ ಕಾಂಗ್ರೆಸ್‌ ಜತೆ ಜೆಡಿಎಸ್‌ ಸೇರಿ ಮೈತ್ರಿಯಾಗಿ 20 ಪರ್ಸೆಂಟೇಜ್‌ ಕಮಿಷನ್‌ ಸರಕಾರವಿದೆ. ಅಭಿವೃದ್ಧಿಗಾಗಿ ಇವ ರಿಬ್ಬರು ಒಂದಾಗಿಲ್ಲ. ಸಾರ್ವಜನಿಕರ ಹಣ ಕೊಳ್ಳೆ ಹೊಡೆಯಲು ಕಾಂಗ್ರೆಸ್‌ ಮತ್ತು ದೇವೇಗೌಡ ಕುಟುಂಬ ದವರು ಮೈತ್ರಿ ಸರಕಾರ ರಚನೆ ಮಾಡಿ ದ್ದಾರೆ. ಎರಡೂ ಪಕ್ಷಗಳ ಅಜೆಂಡಾ ಜನರ ಹಣ ಲೂಟಿ ಮಾಡುವುದೇ ಆಗಿದೆ. ಇವರಿಬ್ಬರಿಗೂ ಯಾವುದೇ ಮಿಷನ್‌ಗಳಿಲ್ಲ. ಇರುವುದು ಕಮಿಷನ್‌ ಮಾತ್ರ. ಲೋಕಸಭೆ ಚುನಾವಣೆ ಅನಂತರ ಕಚ್ಚಾಟ ನಡೆದು ಸರಕಾರ ಬೀಳುವುದು ಖಚಿತ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ “ಎರಡು ಹೊತ್ತಿನ ಊಟ ಸಿಗದವರು ಸೈನ್ಯ ಸೇರುತ್ತಾರೆ’ ಎಂದು ಹೇಳಿದ್ದಾರೆ. ಇದು ಅವರ ಮನಃಸ್ಥಿತಿ ತೋರಿಸುತ್ತದೆ. ಸೈನಿಕರನ್ನು ಇಷ್ಟೊಂದು ಕೀಳಾಗಿ ಕಾಣುವವರಿಗೆ ಯಾವತ್ತೂ ಮತ ಹಾಕಬೇಡಿ. ಮೈನಸ್‌ 40 ಡಿಗ್ರಿ ಸೆ. ತಾಪಮಾನ, ಮಳೆ, ಗಾಳಿಯನ್ನೂ ಲೆಕ್ಕಿಸದೆ ನಮ್ಮ ಸೈನಿಕರು ಗಡಿಯಲ್ಲಿ ಪ್ರಾಣವನ್ನೇ ಒತ್ತೆಯಿಟ್ಟು ಸೇವೆಗೈದು, ಜನರ ರಕ್ಷಣೆ ಮಾಡುತ್ತಾರೆ. ಇಂಥ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡುವವರು ಎಲ್ಲಿಯಾದರೂ ಹೋಗಿ ಮುಳುಗಿ ಸಾಯಲಿ ಎಂದು ಗುಡುಗಿದರು.

ಸನ್ಯಾಸಕ್ಕೆ ಗುನ್ನ
2014ರಲ್ಲಿ ಮೋದಿ ದೇಶದ ಪ್ರಧಾನಿ ಯಾದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಘೋಷಣೆ ಮಾಡಿದ್ದರು. ಈಗ ಅವರ ಪುತ್ರ ಎಚ್‌.ಡಿ. ರೇವಣ್ಣ ಮತ್ತೂಮ್ಮೆ ಕೇಂದ್ರದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬರಲ್ಲ. ಒಂದು ವೇಳೆ ಬಂದರೆ ರಾಜಕೀಯ ಸನ್ಯಾಸ ಸ್ವೀಕರಿಸುವ ಶಪಥ ಮಾಡಿದ್ದಾರೆ. ಅಪ್ಪ-ಮಕ್ಕಳು ಬರೀ ಶಪಥ ಮಾಡುತ್ತಾರೆಯೇ ಹೊರತು ಸನ್ಯಾಸ ಸ್ವೀಕಾರ ಮಾಡಲ್ಲ. ಅವರ ಮಾತನ್ನು ನಂಬಬೇಡಿ. ಬರೀ ಸುಳ್ಳು ಹೇಳುತ್ತ ದೇವೇಗೌಡ ಅವರು, ಮಕ್ಕಳು-ಮೊಮ್ಮಕ್ಕಳು-ಬೀಗರಿಗೆಲ್ಲ ರಾಜಕೀಯ ಅಧಿಕಾರ ನೀಡುತ್ತಿದ್ದಾರೆ ಎಂದರು.

ಜೀವನದಿ ತುಂಗಭದ್ರಾ ಮತ್ತು ಆಲಮಟ್ಟಿ ಡ್ಯಾಂ ಇದ್ದರೂ ಈ ಭಾಗದಲ್ಲಿ ತೀವ್ರ ಬರಗಾಲವಿದೆ. ನೀರಿನ ಸರಿಯಾದ ನಿರ್ವಹಣೆ ಇಲ್ಲದೆ ಇಂತಹ ಸ್ಥಿತಿ ಬಂದಿದೆ. ಇಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಇದಕ್ಕೆ ನೇರ ಕಾರಣ. ರೈತರಿಗೆ ಉಪಯುಕ್ತವಾಗುವ ನೀರಾವರಿ ಯೋಜನೆಗಳನ್ನು ಸರಕಾರ ಅನುಷ್ಠಾನ ಮಾಡಿಲ್ಲ ಎಂದರು.

Advertisement

ಟಿಪ್ಪು ಜಯಂತಿ ಮಾಡುವವರಿಗೆ ಹಂಪಿ ಉತ್ಸವಕ್ಕೆ ದುಡ್ಡಿಲ್ಲ !
ಕಾಂಗ್ರೆಸ್‌-ಜೆಡಿಎಸ್‌ಗೆ ದೇಶ ಒಡೆದಾಳಬೇಕೆನ್ನುವ ಭಾವನೆಯಿದೆ. ರಾಜ್ಯದಲ್ಲಿ ಸುಲ್ತಾನ್‌ (ಟಿಪ್ಪು ಜಯಂತಿ) ಉತ್ಸವ ಆಚರಣೆಗೆ ಸರಕಾರದ ಬಳಿ ಹಣವಿದೆ. ಆದರೆ ಐತಿಹಾಸಿಕ ಹಂಪಿ ಉತ್ಸವ ಆಚರಣೆಗೆ ಹಣವಿಲ್ಲ ಎನ್ನುತ್ತಿದೆ. 70 ವರ್ಷ ಆಡಳಿತ ನಡೆಸಿದ ಯಾವುದೇ ಸರಕಾರ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಿಲ್ಲ. ನಮ್ಮ ಸರಕಾರ ಅನ್ನದಾತನಿಗೆ ಪಿಂಚಣಿ ಯೋಜನೆ ಜಾರಿ ಮಾಡಿದೆ. ಕರ್ನಾಟಕ ಸರಕಾರ ರೈತ ಸಮ್ಮಾನ್‌ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ. ರೈತರ ಖಾತೆಗೆ ಸಕಾಲಕ್ಕೆ ಹಣ ಹಾಕುತ್ತಿಲ್ಲ. ನಾವು ಮತ್ತೆ ಅಧಿ ಕಾರಕ್ಕೆ ಬಂದ ತತ್‌ಕ್ಷಣ ಯೋಜನೆ ಪೂರ್ಣವಾಗಿ ಅನುಷ್ಠಾನ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಇಂದು ಮಂಗಳೂರು, ಬೆಂಗಳೂರು ರ್ಯಾಲಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರವೂ ರಾಜ್ಯಕ್ಕೆ ಆಗಮಿಸಿ ಎರಡು ಕಡೆಗಳಲ್ಲಿ ನಡೆಯುವ ಪ್ರಚಾರ ರ್ಯಾಲಿಗಳಲ್ಲಿ ಭಾಗ ವಹಿಸಲಿದ್ದಾರೆ. ಅಪರಾಹ್ನ 3 ಗಂಟೆಗೆ ಮಂಗಳೂರಿಗೆ ಆಗಮಿಸಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಹುಲ್‌ ಮೂರು ರ್ಯಾಲಿ
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಶನಿವಾರ ರಾಜ್ಯದಲ್ಲಿ ಮೂರು ಸಮಾವೇಶಗಳನ್ನು ನಡೆಸಲಿದ್ದಾರೆ. ಕೋಲಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶದಲ್ಲಿ ಭಾಗಿಯಾಗಿ ಅನಂತರ ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಸಂಜೆ 5ಕ್ಕೆ ಮಂಡ್ಯ ಕ್ಷೇತ್ರದ ಕೆ.ಆರ್‌. ನಗರಕ್ಕೆ ತೆರಳಿ ನಿಖಿ ಪರ ಸಮಾವೇಶದಲ್ಲಿ ಭಾಗ ವಹಿಸಲಿದ್ದಾರೆ.

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ರಾಜ್ಯ ಸರಕಾರ ಹತ್ತು ಪರ್ಸೆಂಟ್‌, ಇಪ್ಪತ್ತು ಪರ್ಸೆಂಟ್‌ ಸರಕಾರ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ ರಫೇಲ್‌ ಡೀಲ್‌ನಲ್ಲಿ ಪ್ರಧಾನಿಯೇ ಮಧ್ಯವರ್ತಿಯಾಗಿದ್ದು, ಅವರೇ ಶೇ.100 ಕಮಿಷನ್‌ ಪಡೆದುಕೊಂಡಿದ್ದಾರೆ. ಅವರಿಗೆ ಯಾವುದೇ ಮಧ್ಯವರ್ತಿಗಳು ಬೇಕಿಲ್ಲ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

ನ್ಯಾಸಿಯಾಗಲು ಹುಟ್ಟಿಲ್ಲ ಈ ದೇವೇಗೌಡ. ರೈತನ ಮಗ, 24/7 ರಾಜಕಾರಣಿ ಅನ್ನುವುದು ಜನತೆಗೆ ಗೊತ್ತಿದೆ. ಕೋಮುವಾದಿ ಶಕ್ತಿಗಳನ್ನು ತಡೆಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲ್ಲ. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ.
– ಎಚ್‌.ಡಿ. ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next