ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮರಣಮೃದಂಗ ಮುಂದುವರಿದಿದ್ದು, ಇಲ್ಲಿನ ಜೈಪುರ್ ಗೋಲ್ಡನ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಘಟನೆ ಶುಕ್ರವಾರ(ಏ.23) ರಾತ್ರಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಚಿನ್ ಸ್ಪೆಷಲ್: ಇವು ತೆಂಡೂಲ್ಕರ್ ರ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳು
ಜೈಪುರ್ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಕೆ.ಬಾಲುಜಾ ಅವರು ಇಂಡಿಯಾ ಟುಡೇ ಜತೆ ಮಾತನಾಡುತ್ತ, ನಮ್ಮ ಆಸ್ಪತ್ರೆಯಲ್ಲಿ ಈಗ ಕೇವಲ ಅರ್ಧ ಗಂಟೆಯಷ್ಟು ಆಕ್ಸಿಜನ್ ಮಾತ್ರ ಇದೆ. ನಿನ್ನೆ ನಮಗೆ 3,600 ಟನ್ ಗಳಷ್ಟು ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಕೇವಲ 1,500 ಲೀಟರ್ಸ್ ಆಕ್ಸಿಜನ್ ಮಾತ್ರ. ಕಳೆದ ರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ 25 ಮಂದಿ ಸಾವಿಗೀಡಾಗುವಂತಾಗಿದೆ ಎಂದು ವಿವರಿಸಿದ್ದಾರೆ.
ಶನಿವಾರ(ಏ.24) ಬೆಳಗ್ಗೆ ಶೀಘ್ರವಾಗಿ ಆಕ್ಸಿಜನ್ ಸರಬರಾಜು ಮಾಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಕಳುಹಿಸಲಾಗಿದೆ ಎಂದು ಬಾಲುಜಾ ತಿಳಿಸಿದ್ದಾರೆ. ದೆಹಲಿ ಹಾಗೂ ಇತರ ರಾಜ್ಯಗಳಲ್ಲಿ ಮೆಡಿಕಲ್ ಆಕ್ಸಿಜನ್ ಕೊರತೆ ಎದುರಿಸುವಂತಾಗಿದೆ ಎಂದು ವರದಿ ಹೇಳಿದೆ.
ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 25 ಮಂದಿ ಕೋವಿಡ್ 19 ರೋಗಿಗಳು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ನಡೆದಿದೆ.