Advertisement

ನೈಋತ್ಯ ರೈಲ್ವೆಯಿಂದ ಒಂದೇ ವರ್ಷದಲ್ಲಿ 20 ನೂತನ ರೈಲು ಸೇವೆ

01:16 PM Jul 02, 2019 | Suhan S |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಕಳೆದ ಹಣಕಾಸು ವರ್ಷದಲ್ಲಿ 20 ನೂತನ ರೈಲುಗಳನ್ನು ಪರಿಚಯಿಸಿದೆ ಎಂದು ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಲಯ ರೈಲ್ವೆ ವೇಳಾಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2018 ಏಪ್ರಿಲ್ನಿಂದ 2019 ಜೂನ್‌ವರೆಗೆ ವಾರದಲ್ಲಿ 6 ದಿನ ಸಂಚರಿಸುವ 2 ರೈಲುಗಳು, ವಾರದಲ್ಲಿ 6 ದಿನ ಸಂಚರಿಸುವ 2 ಜನಶತಾಬ್ಧಿ ರೈಲುಗಳು, ವಾರದಲ್ಲಿ 6 ದಿನ ಸಂಚರಿಸುವ ಉದಯ ಎಕ್ಸ್‌ಪ್ರೆಸ್‌, 4 ಹಮ್‌ಸಫರ್‌ ಎಕ್ಸ್‌ಪ್ರೆಸ್‌, 2 ವಾರದಲ್ಲಿ ಮೂರು ದಿನ ಸಂಚಾರದ ಎಕ್ಸ್‌ಪ್ರೆಸ್‌ ರೈಲುಗಳು, 2 ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ರೈಲುಗಳು, ವಾರದಲ್ಲಿ 5 ದಿನ ಸಂಚರಿಸುವ 2 ರೈಲ್ ಬಸ್‌ಗಳ ಸೇವೆ ಆರಂಭಿಸಲಾಗಿದೆ ಎಂದರು.

ನೈಋತ್ಯ ರೈಲ್ವೆಯಲ್ಲಿ 31 ರೈಲುಗಳ ವೇಗವನ್ನು 5 ನಿಮಿಷದಿಂದ 75 ನಿಮಿಷದವರೆಗೆ ಹೆಚ್ಚಿಸಲಾಗಿದೆ. ಮೂರು ರೈಲುಗಳ ಟ್ರಿಪ್‌ ಹೆಚ್ಚಿಸಲಾಗಿದೆ. ಹಮ್‌ಸಫರ್‌ ವಾರದ ಎಕ್ಸ್‌ಪ್ರೆಸ್‌ ರೈಲನ್ನು ವಾರಕ್ಕೆರಡು ಬಾರಿ ಸಂಚರಿಸಲು, ವಾರಕ್ಕೆ 4 ದಿನ ಸಂಚರಿಸುತ್ತಿದ್ದ ಜನಶತಾಬ್ಧಿ ಎಕ್ಸ್‌ಪ್ರೆಸ್‌ ರೈಲನ್ನು ವಾರಕ್ಕೆ 6 ದಿನ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

10 ಜೋಡಿ ರೈಲುಗಳ ಸೇವೆ ವಿಸ್ತರಿಸಲಾಗಿದೆ. 22 ಎಕ್ಸ್‌ಪ್ರೆಸ್‌ ರೈಲುಗಳ ಸಾಂಪ್ರದಾಯಿಕ ಕೋಚ್‌ಗಳನ್ನು ಎಲ್ಎಚ್ಬಿ ಕೋಚ್‌ಗಳಿಗೆ ಮೇಲ್ದರ್ಜೆಗೇರಿಸಲಾಗಿದೆ. 10 ಸಾಂಪ್ರದಾಯಿಕ ರೈಲುಗಳ ರೇಕ್‌ಗಳನ್ನು ಮೆಮುಗೆ ಬದಲಾವಣೆ ಮಾಡಲಾಗಿದೆ. 112 ರೈಲುಗಳ ಸಮಯ ಪರಿಷ್ಕರಿಸಲಾಗಿದೆ. ಇವುಗಳಲ್ಲಿ 82 ಎಕ್ಸ್‌ಪ್ರೆಸ್‌ ಹಾಗೂ 30 ಪ್ಯಾಸೆಂಜರ್‌ ರೈಲುಗಳು ಸೇರಿವೆ ಎಂದರು.

ಬೆಳಗಾವಿಯಿಂದ ಪುಣೆಗೆ ಸಂಪರ್ಕ ಕಲ್ಪಿಸುವ ನೂತನ ರೈಲು ಸೇವೆಯನ್ನು ಹುಬ್ಬಳ್ಳಿಯಿಂದ ಆರಂಭಿಸಲು ಯಾವುದೇ ತಾಂತ್ರಿಕ ತೊಂದರೆಯಿಲ್ಲ. ಬೆಳಗಾವಿಯಿಂದ ಮುಂಬೈಗೆ ರೈಲು ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಹೊಸ ರೈಲು ಸೇವೆ ಆರಂಭಿಸುವಂತೆ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಸೂಚಿಸಿದ್ದಾರೆ. ಹುಬ್ಬಳ್ಳಿಯಿಂದ ಹಲವು ರೈಲುಗಳ ಸೇವೆ ಇದ್ದು, ಸಚಿವರು ಸೂಚಿಸಿದರೆ ನಾವು ರೈಲನ್ನು ಹುಬ್ಬಳ್ಳಿಯಿಂದ ಓಡಿಸಲಾಗುವುದು ಎಂದರು.

Advertisement

ಸಣ್ಣ ಸಾಧನೆಯಲ್ಲ: ನಾವು ಯಾವುದೇ ಮಾರ್ಗವನ್ನು ನಿರ್ಲಕ್ಷಿಸಿಲ್ಲ. ಜನರ ಬೇಡಿಕೆಗೆ ಅನುಗುಣವಾಗಿ ರೈಲು ಸೇವೆ ಒದಗಿಸಲಾಗುತ್ತದೆ. 200 ರೈಲುಗಳ ಬೇಡಿಕೆಯಿದ್ದರೆ ಎಲ್ಲ ರೈಲುಗಳ ಸೇವೆ ಒದಗಿಸಲು ಸಾಧ್ಯವಾಗುವುದಿಲ್ಲ. ಕೇವಲ 20 ಹೊಸ ರೈಲುಗಳ ಸೇವೆ ಒದಗಿಸಿದ್ದೇವೆ. ಇದು ಸಣ್ಣ ಸಾಧನೆಯೇನಲ್ಲ. ಕಳೆದ ವರ್ಷ 186 ಕಿಮೀ ಡಬ್ಲಿಂಗ್‌ ಕಾರ್ಯ ಮಾಡಲಾಗಿದೆ. ಪ್ರಸಕ್ತ ವರ್ಷ 250 ಕಿಮೀ ಡಬ್ಲಿಂಗ್‌ ಕಾಮಗಾರಿ ಮಾಡುವ ಗುರಿ ಹೊಂದಲಾಗಿದೆ ಎಂದರು.

ಸರಕು ರೈಲಿಗೂ ಆದ್ಯತೆ: ಸರಕು ಸಾಗಣೆಯಿಂದ ನಮಗೆ ಆದಾಯ ಬರುತ್ತದೆ. ಆದ್ದರಿಂದ ಸರಕು ಸಾಗಣೆ ರೈಲುಗಳ ಸಂಚಾರಕ್ಕೂ ಆದ್ಯತೆ ನೀಡಬೇಕು. ರಿಯಾಯಿತಿ ದರದ ಟಿಕೆಟ್‌ನಲ್ಲಿಯೇ ಸೇವೆ ಒದಗಿಸುತ್ತಿರುವುದರಿಂದ ರೈಲ್ವೆ ನಿರಂತರ ನಷ್ಟದಲ್ಲಿದೆ. ಇದೇ ಕಾರಣಕ್ಕೆ ಖಾಸಗಿ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದೆ ಖಾಸಗಿಯವರು ಇನ್ನಷ್ಟು ಸೌಲಭ್ಯಗಳನ್ನು ನೀಡಬಹುದು. ಆಗ ಜನರು ಖಾಸಗಿಯವರು ನಿಗದಿಪಡಿಸಿದಷ್ಟು ಹಣ ನೀಡಿ ಸಂಚರಿಸಬೇಕಾಗುತ್ತದೆ ಎಂದರು.

ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಬ್ಲಿಂಗ್‌ ಕಾರ್ಯ ನಡೆದಿರುವುದರಿಂದ ಇನ್ನೂ 3 ವರ್ಷ ರೈಲುಗಳ ಸಂಚಾರ ವಿಳಂಬವಾಗಲಿದೆ. ಕಾಮಗಾರಿ ಮಧ್ಯೆಯೇ ರೈಲುಗಳನ್ನು ಓಡಿಸುವುದು ಕಷ್ಟ. ಹಲವು ರೈಲುಗಳ ಸಂಚಾರ ವಿಳಂಬವಾಗುತ್ತದೆ. ಪ್ರಯಾಣಿಕರು ಸಹಕರಿಸಬೇಕು. ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. • ಅಜಯಕುಮಾರ ಸಿಂಗ್‌, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ
Advertisement

Udayavani is now on Telegram. Click here to join our channel and stay updated with the latest news.

Next