ಬದುಕುವವರೆಗೆ ಬದುಕಿನಲ್ಲಿ ಸಾರ್ಥಕ ಕೆಲಸಗಳನ್ನು ಮಾಡಿ ಸತ್ತ ಮೇಲೂ ಹೆಸರು ಉಳಿಯುವಂತೆ ಬದುಕುವುದು ನೂರರಲ್ಲಿ ಕೈ ಲೆಕ್ಕಕ್ಕೆ ಸಿಗುವಷ್ಟು ಜನ ಮಾತ್ರ.
ಬದುಕು ಅರಳುವ ಮುನ್ನ,ಕನಸು ಚಿಗುರುವ ಮುನ್ನ ದೇಹ ಕಮರಿ ಹೋದಾಗ, ಅಂಗಾಂಗ ದಾನ ಮಾಡಿ ಇತರ ದೇಹಕ್ಕೆ ಜೀವ ನೀಡುವ ವ್ಯಕ್ತಿಗಳು ಮಾದರಿಯೆನ್ನಿಸಿಕೊಳ್ಳುತ್ತಾರೆ. ಅಂಥ ಮಾದರಿ ಆಗಿ, ಇಪ್ಪತ್ತು ತಿಂಗಳು ಬದುಕಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದ ಧನಿಷ್ಥಾ ಎಂಬ ಪುಟ್ಟ ಬಾಲಕಿಯ ಕಥೆಯಿದು.
ಆಗಷ್ಟೇ ಅಂಬೆಗಾಲಿಟ್ಟು, ಅಮ್ಮನ ಮಡಿಲಲ್ಲಿ ನಲಿಯುತ್ತಾ, ಅಪ್ಪನ ಬೆಚ್ಚಗಿನ ಹೆಗಲಿನಲ್ಲಿ ನಿದ್ರಿಸಬೇಕಾದ ಧನಿಷ್ಥಾ ಅದೊಂದು ದಿನ, ಆಡುತ್ತಾ, ತೆವಳುತ್ತಾ, ಮನೆಯ ಬಾಲ್ಕನಿಯಿಂದ ಕೆಳಗೆ ಬೀಳುತ್ತಾಳೆ. ಆ ಕೂಡಲೇ ಮಗುವನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ರವಾನಿಸುತ್ತಾರೆ. ಜನವರಿ 11 ರಂದು ಧನಿಷ್ಥಾ ಕೊನೆಯುಸಿರೆಳೆಯುತ್ತಾಳೆ.
ಆಸ್ಪತ್ರೆಯ ವೈದ್ಯರು, ಧನಿಷ್ಥಾಳ ಮೆದುಳು ಸ್ಥಗಿತಗೊಂಡಿದೆ ಎಂದು ಹೇಳುತ್ತಾರೆ. ವೈದ್ಯರು ನಿಮ್ಮ ಮಗಳು ಬದುಕುವುದಿಲ್ಲ ಎನ್ನುವ ಸಿಡಿಲಿನ ಆಘಾತದ ಸುದ್ದಿಯನ್ನು ಹೇಳಿ, ಭಾರತದಲ್ಲಿ ಅಂಗಾಂಗ ಪ್ರತಿ ವರ್ಷ ಅಂಗಾಂಗಗಳಿಲ್ಲದೆ 5 ಲಕ್ಷ ಜನ ಸಾಯುತ್ತಾರೆ. ನಿಮ್ಮ ಮಗಳ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಜೀವ ಕೊಡಬಹುದೇ ಎಂದು ಕೇಳುತ್ತಾರೆ.
ಅನಿರೀಕ್ಷಿತವಾಗಿ ಮಗಳನ್ನು ಕಳೆದುಕೊಂಡ ಮಾಸದ ದುಃಖ ಒಂದು ಕಡೆಯಾದರೆ,ಅಂಗಾಂಗ ದಾನವನ್ನು ಮಾಡಿ ಇತರರ ಜೀವ ಉಳಿಸುವ ನಿರ್ಧಾರ ಇನ್ನೊಂದು ಕಡೆ. ಧನಿಷ್ಥಾಳ ಅಪ್ಪ ಅಮ್ಮ ಮಗಳ ಅಂಗಾಂಗ ದಾನವನ್ನು ಮಾಡಲು ಒಪ್ಪುತ್ತಾರೆ. ಧನಿಷ್ಥಾಳ ಅಂಗಾಂಗಳು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಅದನ್ನು ವೈದ್ಯರು ಕಸಿ ಮಾಡುತ್ತಾರೆ.
ಧನಿಷ್ಥಾಳ ಹೃದಯ,ಯಕೃತ್ತು,ಎರಡು ಮೂತ್ರ ಪಿಂಡ, ಮತ್ತು ಎರಡು ಕಾರ್ನಿಯಾಗಳನ್ನು ಆಸ್ಪತ್ರೆಯಲ್ಲಿ ತೆಗೆದು ಅಗತ್ಯವಿದ್ದ ರೋಗಿಗಳಿಗೆ ನೀಡಲಾಯಿತು. ಮೂತ್ರ ಪಿಂಡಗಳನ್ನು ವಯಸ್ಕರಿಗೆ ನೀಡಿದರೆ, ಹೃದಯ ಹಾಗೂ ಯಕೃತ್ತು ಮಕ್ಕಳಿಗೆ ನೀಡಲಾಗಿದೆ.
ಅಂಗಾಂಗ ದಾನದಿಂದ ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್ ಡೊನರ್ ಆಗಿದ್ದಾಳೆ.