Advertisement

ಹಾರ್ದಿಕ್‌, ರಾಹುಲ್ ಗೆ 20 ಲ.ರೂ. ದಂಡ

02:25 AM Apr 21, 2019 | Team Udayavani |

ಹೊಸದಿಲ್ಲಿ: ‘ಕಾಫಿ ವಿತ್‌ ಕರಣ್‌’ ಟೆಲಿವಿಷನ್‌ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಭಾರೀ ವಿವಾದಕ್ಕೊಳಗಾಗಿದ್ದ ಕೆ.ಎಲ್. ರಾಹುಲ್ ಹಾಗೂ ಹಾರ್ದಿಕ್‌ ಪಾಂಡ್ಯಗೆ ಅಂತೂ ಮುಕ್ತಿ ಸಿಕ್ಕಿದೆ. ಇಬ್ಬರನ್ನೂ ಪ್ರಕರಣದಲ್ಲಿ ವಿಚಾರಣೆ ನಡೆಸಿದ್ದ ಬಿಸಿಸಿಐ ವಿಶೇಷ ತನಿಖಾಧಿಕಾರಿ ಡಿ.ಕೆ. ಜೈನ್‌, ತಲಾ 20 ಲಕ್ಷ ರೂ. ದಂಡ ಹೇರುವ ಮೂಲಕ ಅಂತಿಮ ಶಿಕ್ಷೆ ಪ್ರಕಟಿಸಿದ್ದಾರೆ. ವಿವಾದವಾದಾಗಲೇ ತಾತ್ಕಾಲಿಕವಾಗಿ 5 ಪಂದ್ಯ ನಿಷೇಧ ಅನುಭವಿಸಿದ್ದರಿಂದ, ಇಬ್ಬರೂ ಕ್ರಿಕೆಟಿಗರು ಹೆಚ್ಚುವರಿ ನಿಷೇಧದಿಂದ ಪಾರಾಗಿದ್ದಾರೆ.

Advertisement

ಕಾಫಿ ವಿತ್‌ ಕರಣ್‌ ಟೀವಿ ಶೋನಲ್ಲಿ ಹಾರ್ದಿಕ್‌, ಹಲವು ಮಹಿಳೆಯರೊಂದಿಗೆ ನನಗೆ ಸಂಬಂಧವಿದೆ ಎಂದು ಮುಕ್ತವಾಗಿ ಮಾತನಾಡಿದ್ದು ಮಹಿಳಾ ವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೇ ಕಾರ್ಯಕ್ರಮದಲ್ಲಿ ರಾಹುಲ್ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಿದ್ದರೂ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಅವರನ್ನೂ ದೋಷಿಯ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು.

4 ವಾರಗಳಲ್ಲಿ ದಂಡ ಪಾವತಿ
ಇಬ್ಬರೂ 4 ವಾರಗಳೊಳಗೆ ತಲಾ 20 ಲಕ್ಷ ರೂ. ದಂಡವನ್ನು ಪಾವತಿಸುವಂತೆ ಡಿ.ಕೆ. ಜೈನ್‌ ತಿಳಿಸಿದ್ದಾರೆ. ಇದರಲ್ಲಿ ವಿಫ‌ಲವಾದರೆ, ಇಬ್ಬರ ಪಂದ್ಯ ಶುಲ್ಕದಲ್ಲಿ ಕಡಿತಗೊಳಿಸಿ, ದಂಡ ವಸೂಲಿ ಮಾಡುವುದಾಗಿ ಎಚ್ಚರಿಸಲಾಗಿದೆ.

ಇಬ್ಬರೂ ಪಾವತಿಸುವ 20 ಲಕ್ಷ ರೂ. ಪೈಕಿ 10 ಲಕ್ಷ ರೂ. ಮೊತ್ತವನ್ನು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಯೋಧರ ಪತ್ನಿಯರಿಗೆ, ಒಂದು ಲಕ್ಷ ರೂ.ನಂತೆ ನೀಡಲಾಗುತ್ತದೆ. ತುರ್ತು ಆರ್ಥಿಕ ನೆರವಿನ ಅಗತ್ಯವುಳ್ಳ ಪತ್ನಿಯರನ್ನು ಗುರುತಿಸಿ, ‘ಭಾರತ್‌ ಕೆ ವೀರ್‌ ಆ್ಯಪ್‌’ ಮೂಲಕ ಪಾವತಿ ಮಾಡಲಾಗುತ್ತದೆ. ಇನ್ನುಳಿದ 10 ಲಕ್ಷ ರೂ.ಗಳನ್ನು ಭಾರತದ ಅಂಧ ಕ್ರಿಕೆಟಿಗರ ಸಂಸ್ಥೆಗೆ ನೀಡಲಾಗುತ್ತದೆ.

ಸಮಾಜಕ್ಕೆ ಮಾದರಿ
ಕ್ರಿಕೆಟಿಗರು ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಯುವಜನತೆ ಇವರನ್ನು ಗಮನಿಸುವುದರ ಜತೆಗೆ ಪ್ರಭಾವಕ್ಕೊಳಗಾಗುತ್ತಾರೆ. ಆದ್ದರಿಂದ ಅವರು ಬೇಕಾಬಿಟ್ಟಿ ಮಾತನಾಡುವಂತಿಲ್ಲ ಎಂದು ಜೈನ್‌, ಶಿಕ್ಷೆ ಪ್ರಕಟಿಸಿದ ಅನಂತರ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next