Advertisement

20 ಲಕ್ಷ ರೂ. ಮೌಲ್ಯದ 144 ಮೊಬೈಲ್ ವಶ

03:45 PM Aug 07, 2019 | Suhan S |

ಮಂಡ್ಯ: ಮೊಬೈಲ್ ಷೋರೂಂಗಳಿಗೆ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳನ್ನು ಕಳವು ಮಾಡಿದ್ದ ಅಂತರ ಜಿಲ್ಲಾ ಮೊಬೈಲ್ ಕಳ್ಳರನ್ನು ನಾಗಮಂಗಲ ಪೊಲೀಸರು ಬಂಧಿಸಿ 20 ಲಕ್ಷ ರೂ. ಮೌಲ್ಯದ 144 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಮೈಸೂರಿನ ಬನ್ನಿಮಂಟಪ ನಿವಾಸಿ ಕಬ್ಟಾಳು ಚಂದು(25), ಅರ್ಜುನ ಅಲಿಯಾಸ್‌ ಕುಮಾರ್‌ ಅಲಿಯಾಸ್‌ ಬಜ್ಜಕ(26), ಕೆ.ಆರ್‌.ಪೇಟೆ ತಾಲೂಕು ಕೃಷ್ಣಾಪುರ ಗ್ರಾಮದ ಚನ್ನಪ್ಪ(20) ಬಂಧಿತರು.

ಮತ್ತೂಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಗಳ ಸಮೇತ ನಗದು, ಮೊಬೈಲ್ಗಳನ್ನು ಪ್ರದರ್ಶಿಸಿದರು.

ಘಟನೆ ವಿವರ: ಕಳೆದ ಜು.20ರಂದು ನಾಗಮಂಗಲ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಮುಂದಿರುವ ಸಂಗೀತ ಮೊಬೈಲ್ ಅಂಗಡಿ ರೋಲಿಂಗ್‌ ಷಟರ್‌ನ್ನು ಎಲೆಕ್ಟ್ರಿಕ್‌ ಕಟರ್‌ನಿಂದ ಮುರಿದು ಒಳಗೆ ನುಗ್ಗಿ 26,23,287 ರೂ. ಮೌಲ್ಯದ ವಿವಿಧ ಕಂಪನಿಯ 177 ಮೊಬೈಲ್ ಸೆಟ್‌ಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು.

ನಾಗಮಂಗಲ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಎಂ.ನಂಜಪ್ಪ ನೇತೃತ್ವದಲ್ಲಿ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡ ಕಳ್ಳತನದ ಸಂಪೂರ್ಣ ಮಾಹಿತಿ ಪಡೆದು ತನಿಖೆ ಆರಂಭಿಸಿತ್ತು.

Advertisement

ಯಲಹಂಕದಲ್ಲಿ ಓರ್ವನ ಬಂಧನ: ಸಂಗೀತಾ ಮೊಬೈಲ್ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಗಳನ್ನಾಧರಿಸಿ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿದರು. ಕಾರ್ಯಾಚರಣೆಗಿಳಿದ ಅಪರಾಧ ತನಿಖಾ ತಂಡ, ಆರೋಪಿಗಳಿಗಾಗಿ ವಿವಿಧೆಡೆ ಷೋಧ ನಡೆಸಿದ್ದರು. ಆ.4ರಂದು ಕಬ್ಟಾಳು ಅಲಿಯಾಸ್‌ ಚಂದುನನ್ನು ಬೆಂಗಳೂರಿನ ಯಲಹಂಕದಲ್ಲಿ ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಕಳ್ಳತನದ ಸತ್ಯಾಂಶ ಹೊರಬಿತ್ತು. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ.

ಅತ್ತಿಬೆಲೆಯಲ್ಲಿ ಇಬ್ಬರ ಬಂಧನ: ಮತ್ತಿಬ್ಬರು ಆರೋಪಿಗಳಾದ ಅರ್ಜುನ ಹಾಗೂ ಚನ್ನಪ್ಪನನ್ನು ಆ.5ರಂದು ಬೆಂಗಳೂರಿನ ಅತ್ತಿಬೆಲೆಯಲ್ಲಿ ಬಂಧಿಸಿದರು. ಬಂಧಿತ ರಿಂದ ಒಟ್ಟು 20 ಲಕ್ಷ ರೂ. ಮೌಲ್ಯದ 144 ಮೊಬೈಲ್ ಸೆಟ್‌ಗಳು, ಒಂದು ಲಕ್ಷ ರೂ. ಮೌಲ್ಯದ ಮೂರು ದ್ವಿಚಕ್ರ ವಾಹನ, ಕೃತ್ಯಕ್ಕೆ ಬಳಸಿದ್ದ ಕಟರ್‌, ಕ್ಯಾಟರ್‌ಪಿಲ್ಲರ್‌ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯದಲ್ಲಿ ಒಟ್ಟು ನಾಲ್ವರು ಆರೋಪಿಗಳಿದ್ದು, ಓರ್ವ ತಲೆ ಮರೆಸಿಕೊಂಡಿದ್ದಾನೆ. ಜೊತೆಗೆ ಆತನ ಬಳಿ ಇನ್ನೂ 33 ಹ್ಯಾಂಡ್‌ಸೆಟ್‌ಗಳಿವೆ ಎನ್ನಲಾಗಿದ್ದು, ಮತ್ತೂಬ್ಬ ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಪಿಎಸ್‌ಐ ರವಿಕಿರಣ್‌ ಎಂ.ಎ, ಎಎಸ್‌ಐ ಎ.ಎಚ್. ಪೀಟರ್‌, ಸಿಬ್ಬಂದಿಗಳಾದ ನಾರಾಯಣ, ಹರೀಶ್‌, ರೇವಣ್ಣ, ರವೀಶ್‌, ಹನೀಫ್‌, ಇಂದ್ರಕುಮಾರ್‌, ಉಮೇಶ್‌, ಸಿದ್ದಪ್ಪ, ಕಿರಣ್‌ಕುಮಾರ್‌, ಮಂಜನಾಥ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪೊಬೆಷನರಿ ಐಪಿಎಸ್‌ ಅಧಿಕಾರಿ ನರಸಿಂಹ ವಿ.ತಾಮ್ರಧ್ವಜ, ಡಿವೈಎಸ್ಪಿ ವಿಶ್ವನಾಥ್‌, ಸಿಪಿಐ ನಂಜಪ್ಪ ಇತರರು ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next