ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಾಷ್ಟ್ರಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಪ್ರಕೃತಿ ವಿಕೋಪ! ಜಾಗತಿಕ ತಾಪಮಾನ ಏರಿಕೆ ಒಂದೆಡೆಯಾದರೆ, ಅಕಾಲಿಕ ಮಳೆ, ಅನಿಶ್ಚಿತತೆ ಮತ್ತೂಂದೆಡೆ. ಕಳೆದ 50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬರೋಬ್ಬರಿ 2 ದಶಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 4.3 ಲಕ್ಷ ಕೋಟಿ ಡಾಲರ್ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ.
ಮುನ್ನೆಚ್ಚರಿಕೆ ಫಲಿಸಿದೆ
ಹವಾಮಾನ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡುತ್ತಿರುವ ಪರಿಣಾಮವಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಆರ್ಥಿಕ ನಷ್ಟಗಳು ವಿಪರೀತವಾಗಿದೆ. ವಿಪರ್ಯಾಸವೆಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಹೆಚ್ಚಿನ ಸಾವು-ನೋವು ಸಂಭವಿಸಿರುವುದು ವರದಿಯಾಗಿದೆ. ಇನ್ನು 1970ರಿಂದ 2021ರವರೆಗೆ ಅಮೆರಿಕ ಒಂದರಲ್ಲಿಯೇ 1.7 ಲಕ್ಷ ಕೋಟಿ ಡಾಲರ್ ಆರ್ಥಿಕ ನಷ್ಟ ವರದಿಯಾಗಿದೆ.
50 ವರ್ಷಗಳಲ್ಲಿ 12,000 ಘಟನೆ!
ವಿಶ್ವ ಹವಾಮಾನ ಸಂಸ್ಥೆ ವರದಿ ಪ್ರಕಾರ ಕಳೆದ 50 ವರ್ಷಗಳಲ್ಲಿ ಚಂಡಮಾರುತ, ಭೂಕಂಪ, ಪ್ರವಾಹದಂಥ ವಿಕೋಪದಿಂದಾಗಿ 12,000ಕ್ಕೂ ಅಧಿಕ ಪ್ರಾಕೃತಿಕ ವಿಕೋಪಗಳ ಘಟನೆಗಳು ವರದಿಯಾಗಿವೆ. ಪ್ರಕೃತಿ ಮೇಲಿನ ಮನುಷ್ಯನ ಅವಲಂಬನೆ ಹೆಚ್ಚುತ್ತಿದ್ದು, ಕಾಡಿನ ನಾಶ ವಿಪರೀತವಾಗಿದೆ. ಇದರ ಪರಿಣಾಮ ಭೂಮಿಯ ತಾಪಮಾನ ವರ್ಷದಿಂದ ವರ್ಷಕ್ಕೆ ಏರುತ್ತಲಿದೆ. ಇದರಿಂದಾಗಿಯೇ ಶಾಖದ ಅಲೆ, ಚಂಡಮಾರುತ, ಬರ ಪರಿಸ್ಥಿತಿ ವರದಿಯಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.