ಗುವಾಹಟಿ: ಭಾರೀ ಮಳೆ, ಪ್ರವಾಹದಿಂದ ತತ್ತರಿಸಿಹೋಗಿರುವ ಅಸ್ಸಾಂನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಭೂಕುಸಿತವು ಕನಿಷ್ಠ 20 ಮಂದಿಯನ್ನು ಬಲಿಪಡೆದಿದೆ. ದಕ್ಷಿಣ ಅಸ್ಸಾಂನ ಬಾರಕ್ ವ್ಯಾಲಿಯ ಹೈಲಕಂಡಿ, ಕರೀಂಗಂಜ್ ಹಾಗೂ ಕಛಾರ್ ಜಿಲ್ಲೆಗಳಲ್ಲಿ ಮಂಗಳವಾರ ಸರಣಿ ಭೂಕುಸಿತ ಸಂಭವಿಸಿದೆ. 20 ಮಂದಿಯ ಪೈಕಿ ಕಛಾರ್ ಜಿಲ್ಲೆಯ ಲಖೀಪುರದಲ್ಲಿ 7 ಮಂದಿ ಸಾವಿಗೀಡಾದರೆ, ಹೈಲಕಂಡಿಯಲ್ಲಿ 7 ಮತ್ತು ಕರೀಂಗಂಜ್ ನಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದಾಗಿಯೇ ಭೂಕುಸಿತದ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂ ಅರಣ್ಯ ಸಚಿವ ಪರಿಮಳ್ ಶುಕ್ಲವೈದ್ಯ ಅವರು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಹಾಗೂ ಪ್ರವಾಹದಿಂದ ಒಟ್ಟಾರೆ 9 ಮಂದಿ ಅಸುನೀಗಿದ್ದಾರೆ. ಒಟ್ಟಾರೆ 321 ಗ್ರಾಮಗಳು ಜಲಾವೃತವಾಗಿದ್ದು, 3 ಲಕ್ಷದಷ್ಟು ಜನರು ನಿರ್ವಸಿತರಾಗಿದ್ದಾರೆ. ಪ್ರವಾಹದಿಂದಾಗಿ 2,678 ಹೆಕ್ಟೇರ್ ಬೆಳೆ ನಾಶವಾಗಿವೆ.