ಕಲ್ಲಿಕೋಟೆ: ಕೇರಳದ ಕಲ್ಲಿಕೋಟೆಯಲ್ಲಿ ಟೇಬಲ್ ಟಾಪ್ ರನ್ ವೇನಿಂದ ಜಾರಿ ಪತನವಾದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಹಾಗೂ ಸಹ ಪೈಲಟ್ ಸಹಿತ ಕನಿಷ್ಟ 20 ಜನ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ.
ಈ ವಿಮಾನದಲ್ಲಿ ಸಿಬ್ಬಂದಿ ಸಹಿತ 191 ಪ್ರಯಾಣಿಕರಿದ್ದರು.ಸುಮಾರು 10 ವರ್ಷಗಳ ನಂತರ ದೇಶದಲ್ಲಿ ಸಂಭವಿಸಿದ ಭೀಕರ ವಾಣಿಜ್ಯ ವಾಯುಯಾನ ದುರಂತ ಇದು ಎನ್ನಲಾಗಿದೆ. ವಂದೇ ಭಾರತ್ ಮಿಷನ್ ನಲ್ಲಿ ದುಬಾಯಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ರನ್ ವೇನಲ್ಲಿ ಶುಕ್ರವಾರ ಜಾರಿದ ಪರಿಣಾಮ ಈ ದುರಂತ ಸಂಭವಿಸಿತ್ತು.
ದುಬೈ ಟು ಕೋಯಿಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕಣಿವೆಯಲ್ಲಿ ಬಿದ್ದ ರಭಸಕ್ಕೆ ಎರಡು ಭಾಗಗಳಾಗಿ ಮುರಿದುಹೋಗಿದೆ. ಆದರೆ ಅದೃಷ್ಟವಶಾತ್ ಬೆಂಕಿ ಹೊತ್ತಿಕೊಂಡಿಲ್ಲವಾಗಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಸಾವುನೋವುಗಳ ಬಗ್ಗೆ ನಾವು ಇನ್ನೂ ಅಂತಿಮ ಅಂಕಿಅಂಶಗಳು ವರದಿಯಾಗಿಲ್ಲ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ.
ಲ್ಯಾಂಡಿಂಗ್ ವೇಳೆ ದುರಂತ: ರಾತ್ರಿ 7.40ರ ಸುಮಾರಿಗೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಕೆಲವು ದಿನಗಳಿಂದ ಕೇರಳದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ವಿಮಾನವು ರನ್‌ವೇಯಲ್ಲಿ ಜಾರಿ ಗೋಡೆಗೆ ಬಡಿದು ಕಮರಿಗೆ ಬಿದ್ದಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಪ್ರಕಾರ, ವಿಮಾನವು ಲ್ಯಾಂಡಿಂಗ್ ಆಗುವ ಮುನ್ನ ಹಲವು ಬಾರಿ ವಿಮಾನ ನಿಲ್ದಾಣದ ಸುತ್ತ ಸುತ್ತಿದ್ದು, ಎರಡು ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿ ವಿಫಲವಾಗಿತ್ತು.
ಹಲವರ ಸ್ಥಿತಿ ಗಂಭೀರ: ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಕಲ್ಲಿಕೋಟೆ ಮತ್ತು ಮಲಪ್ಪುರಂನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತಪಟ್ಟ ಪೈಲಟ್ ಅನ್ನು ಕಮಾಂಡರ್ ಕ್ಯಾಪ್ಟನ್ ದೀಪಕ್ ಸಾಠೆ ಎಂದು ಗುರುತಿಸಲಾಗಿದೆ.
ತುರ್ತು ಕ್ರಮಕ್ಕೆ ಸಿಎಂ ಸೂಚನೆ: ಕರಿಪುರದಲ್ಲಿ ನಡೆದ ವಿಮಾನ ದುರಂತಕ್ಕೆ ಸಂಬಂಧಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸೂಚಿಸಿದ್ದೇನೆ. ರಕ್ಷಣ ಕಾರ್ಯ ಮತ್ತು ವೈದ್ಯಕೀಯ ಚಿಕಿತ್ಸೆ ನಿಟ್ಟಿನಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಗಣ್ಯರ ಆಘಾತ: ಘಟನೆಯ ಕುರಿತು ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ರಾಜಕೀಯ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಾದರಿ ದುರಂತ
2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಮಾನ ದುರಂತದ ಮಾದರಿಯಲ್ಲೇ ಶುಕ್ರವಾರದ ದುರಂತವೂ ಸಂಭವಿಸಿದೆ. 2010ರ ದುರಂತದಲ್ಲಿ 158 ಮಂದಿ ಸಾವಿಗೀಡಾಗಿದ್ದರು. ಆಗಲೂ ವಿಮಾನ ರನ್‌ವೇನಲ್ಲಿ ಸ್ಕಿಡ್ ಆಗಿ, ಗೋಡೆಗೆ ಬಡಿದು ಕಮರಿಗೆ ಬಿದ್ದಿತ್ತು. ಈ ವೇಳೆ ವಿಮಾನವು ಹೋಳಾಗಿ, ಬೆಂಕಿ ಹೊತ್ತಿಕೊಂಡಿತ್ತು. ಕೇರಳದಲ್ಲಿ ಶುಕ್ರವಾರ ನಡೆದ ದುರಂತವೂ ಇದೇ ಮಾದರಿಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿಲ್ಲ. ಈ ಸಂದರ್ಭ ಮಳೆಯೂ ಸುರಿಯುತ್ತಿತ್ತು. ಕರಿಪುರ್ ಏರ್‌ಪೋರ್ಟ್ ಕೂಡ ಟೇಬಲ್‌ಟಾಪ್ ರನ್‌ವೇ (ಬೆಟ್ಟದಂಥ ಪ್ರದೇಶದಲ್ಲಿ ರನ್‌ವೇ ಇದ್ದು, ಅದರ ಎರಡೂ ಭಾಗದಲ್ಲಿ ಅಥವಾ ಒಂದು ಭಾಗದಲ್ಲಿ ಆಳದ ಕಮರಿ ಇರುತ್ತದೆ)ಯನ್ನು ಹೊಂದಿದ್ದು, ಇಂಥ ರನ್‌ವೇಗಳಲ್ಲಿ ಪೈಲಟ್‌ಗಳು ಅತ್ಯಂತ ಹೆಚ್ಚು ಎಚ್ಚರಿಕೆ ಹಾಗೂ ಕೌಶಲದಿಂದ ವಿಮಾನವನ್ನು ಇಳಿಸಬೇಕಾಗುತ್ತದೆ.