Advertisement

ಹಿಡಕಲ್ದಿಂದ ಹೆಚ್ಚುವರಿ ನೀರು ತರಲು 20 ಕೋಟಿ

10:04 AM Jun 19, 2019 | Team Udayavani |

ಬೆಳಗಾವಿ: ನಗರದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಹಿಡಕಲ್ ಜಲಾಶಯದಿಂದ ಹೆಚ್ಚುವರಿಯಾಗಿ ನೀರು ತರಲು 20 ಕೋಟಿ ರೂ. ವೆಚ್ಚದ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ಅರಣ್ಯ ಹಾಗೂ ಪರಿಸರ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

Advertisement

ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹಿಡಕಲ್ ಜಲಾಶಯದಿಂದ ನೀರು ಪಂಪಿಂಗ್‌ ಮಾಡುವ ಕಾರ್ಯಕ್ಕೆ ಸುಮಾರು 20 ಕೋಟಿ ರೂ. ಟೆಂಡರ್‌ ಮುಗಿದಿದೆ. 12 ಎಂ.ಜಿ.ಡಿ.ಯಿಂದ 18 ಎಂ.ಜಿ.ಡಿ. ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಇದರಿಂದ ಸುಮಾರು ಶೇ. 30ರಷ್ಟು ನೀರು ಹೆಚ್ಚುವರಿಯಾಗಿ ಸಿಗಲಿದೆ. ಬೇಗ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸದ್ಯ ಬೆಳಗಾವಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಹಿಡಕಲ್ ಜಲಾಶಯದಿಂದ ನೀರು ನಗರಕ್ಕೆ ಪೂರೈಕೆ ಆಗುತ್ತಿದೆ. ರಾಕಸಕೊಪ್ಪ ಜಲಾಶಯ ಖಾಲಿಯಾಗಿದ್ದರೂ ಅದರ ಕೊರತೆ ನೀಗಿಸಲು ಹಿಡಕಲ್ ನಮಗೆ ಆಶ್ರಯವಾಗಿದೆ. ಯಾವ ಕಡೆಯೂ ಸದ್ಯ ಸಮಸ್ಯೆ ಇಲ್ಲ. ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದ್ದರೂ ಅದನ್ನು ಪರಿಹರಿಸಲಾಗುವುದು. ನಗರದಲ್ಲಿ ಟ್ಯಾಂಕರ್‌ ನೀರು ಪೂರೈಸುವಂಥ ಸ್ಥಿತಿ ಇಲ್ಲ. ಮಳೆ ಆರಂಭವಾದರೆ ರಾಕಸಕೊಪ್ಪ ಕೂಡ ತುಂಬಲಿದೆ ಎಂದರು.

ನಗರದಲ್ಲಿ ನಿರಂತರ 24×7 ನೀರು ಪೂರೈಸುವ ಕಾರ್ಯಕ್ಕೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದೆ ಎಂದು ತಿಳಿಸಿದ ಸಚಿವ ಜಾರಕಿಹೊಳಿ, ಈಗಿನ 12 ಎಂ.ಜಿ.ಟಿ.ಯಿಂದ 18 ಎಂ.ಜಿ.ಟಿ. ನೀರನ್ನು ಹೆಚ್ಚುವರಿಯಾಗಿ ಪಂಪಿಂಗ್‌ ಮಾಡಲು 20 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ ಶೀಘ್ರದಲ್ಲಿ ಬೆಳಗಾವಿ ನಗರಕ್ಕೆ ನೀರು ತಲುಪಲಿದೆ ಎಂದರು.

Advertisement

ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ನಾಲ್ಕು ಹಂತದ ಕಾಮಗಾರಿ ಸುಮಾರು ಶೇ. 95ರಷ್ಟು ಮುಕ್ತಾಯಗೊಂಡಿದೆ. 5ನೇ ಹಂತದ ಕಾಮಗಾರಿ ಆರಂಭವಾಗಲಿದೆ. ಕೆಲವೊಂದು ಕಡೆಗೆ ಜಾಗದ ಸಮಸ್ಯೆ, ತಾಂತ್ರಿಕ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಿಕೊಳ್ಳಲಾಗುವುದು. ಕೆಲ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಇನ್ನೂ ಕೆಲವು ಟೆಂಡರ್‌ ಆಗಬೇಕಾಗಿದೆ ಎಂದರು. ಇನ್ನು ಎರಡೂವರೆ ವರ್ಷಗಳ ಅವಧಿಯಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಮುಗಿಯಲಿವೆ. ಸದ್ಯ 700 ಕೋಟಿ ರೂ. ವೆಚ್ಚದಲ್ಲಿ ಶೇ. 60ರಷ್ಟು ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಇನ್ನು ಶೇ. 40ರಷ್ಟು ಕೆಲಸಗಳು ಇನ್ನುಳಿದ ಎರಡೂವರೆ ವರ್ಷದಲ್ಲಿ ಮುಗಿಸುವಂತೆ ಸೂಚಿಸಲಾಗಿದೆ ಎಂದರು.

ಸ್ಮಾರ್ಟ್‌ ಸಿಟಿ, ಮುಖ್ಯಮಂತ್ರಿಗಳ 100 ಕೋಟಿ ರೂ. ವಿಶೇಷ ಅನುದಾನ, ಸ್ಲಮ್‌ ಬೋರ್ಡ್‌, ವಸತಿ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಯಾವ ಭಾಗದಲ್ಲಿ ಜಾಗದ ಸಮಸ್ಯೆ ಹಾಗೂ ತಾಂತ್ರಿಕ ಸಮಸ್ಯೆಗಳಿವೆಯೋ ಅವುಗಳನ್ನೆಲ್ಲ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next