ಸಾಗರ: ಸೊರಬ ರಸ್ತೆ ಅಗಲೀಕರಣಕ್ಕೆ ಪರಿಹಾರ ನೀಡಲು ಹಣ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಬಳಿ ರಸ್ತೆ ಅಗಲೀಕರಣಕ್ಕೆ ಪರಿಹಾರ ಕೊಡಲು 6 ಕೋಟಿ ರೂ. ಹಣ ಇದ್ದು, ಹೆಚ್ಚುವರಿಯಾಗಿ ಸರ್ಕಾರದಿಂದ ಸದ್ಯದಲ್ಲೇ 20 ಕೋಟಿ ರೂ. ಬಿಡುಗಡೆ ಮಾಡಿಸಲಾಗುತ್ತದೆ ಎಂದು ಶಾಸಕ ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸೊರಬ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ನಿವೇಶನ ಮಾಲೀಕರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.
ರಸ್ತೆ ಅಗಲೀಕರಣ ಪ್ರಕ್ರಿಯೆ ಚುರುಕುಗೊಳಿಸಲು ನಗರಸಭೆ ಮತ್ತು ಅಧಿಕಾರಿಗಳು ಗಮನ ಹರಿಸಬೇಕು. ಸಣ್ಣಪುಟ್ಟ ಸಮಸ್ಯೆ ಮುಂದಿಟ್ಟು ಜಾಗ ಕೊಟ್ಟವರನ್ನು ಸತಾಯಿಸಬೇಡಿ. ರಸ್ತೆಗಾಗಿ ಅವರು ನಮಗೆ ಜಾಗ ಬಿಟ್ಟುಕೊಟ್ಟಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಮರೆಯಬಾರದು. ಹಣ ಬಿಡುಗಡೆ ಮಾಡಲು ಕೆಲವು ಪ್ರಕರಣಗಳಲ್ಲಿ ತಿಂಗಳುಗಟ್ಟಲೆ ತೆಗೆದುಕೊಂಡಿದ್ದು ನನ್ನ ಗಮನಕ್ಕೆ ಬಂದಿದೆ. ಇದರಿಂದ ಸರ್ಕಾರ ಮತ್ತು ನನಗೆ ಕೆಟ್ಟ ಹೆಸರು ಬರುತ್ತದೆ. ಇದನ್ನು ಸಹಿಸಿಕೊಳ್ಳುವುದಿಲ್ಲ. ತಕ್ಷಣ ಜಾಗ ಕೊಟ್ಟವರಿಗೆ ಹಣ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಶೇ. 75ರಷ್ಟು ನಿವಾಸಿಗಳು ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಟ್ಟಿದ್ದಾರೆ. ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಸರ್ಕಾರ ರಸ್ತೆ ಅಗಲೀಕರಣಕ್ಕೆ ನೀವು ಜಾಗ ಕೊಟ್ಟಿದ್ದಕ್ಕೆ ಹೆಚ್ಚಿನ ಪರಿಹಾರ ನೀಡುತ್ತಿದೆ. ಮಳೆಗಾಲ ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದ ಒಂದು ತಿಂಗಳಿನೊಳಗೆ ಎಲ್ಲರೂ ಊರಿನ ಅಭಿವೃದ್ಧಿ ದೃಷ್ಟಿಯಿಂದ ಜಾಗ ಬಿಟ್ಟು ಕೊಟ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಾಗ ಬಿಟ್ಟುಕೊಟ್ಟವರಿಗೆ ನಗರಸಭೆಯಿಂದ ಹೊಸ ಬಿಲ್ಡಿಂಗ್ ಕಟ್ಟಿಕೊಳ್ಳುವುದು ಸೇರಿದಂತೆ ವಿದ್ಯುತ್ ಸೌಲಭ್ಯ ಮೊದಲಾದವುಗಳನ್ನು ಸುಲಭವಾಗಿ ಮಾಡಿಸಿಕೊಡಲಾಗುತ್ತಿದೆ. ಅಧಿಕಾರಿಗಳು ಸತಾಯಿಸಿದರೆ ನನ್ನ ಗಮನಕ್ಕೆ ತನ್ನಿ ಎಂದು ಸ್ಥಳೀಯರಿಗೆ ತಿಳಿಸಿದ ಶಾಸಕರು, ಮಳೆಗಾಲ ಬಂದರೆ ಕೆಸರುಗದ್ದೆಯಾಗಿ ಬಿಡುತ್ತದೆ. ಅಷ್ಟರೊಳಗೆ ಎಲ್ಲರೂ ಅಗಲೀಕರಣಕ್ಕೆ ಜಾಗ ತೆರವು ಮಾಡಿಕೊಟ್ಟರೆ ನಗರಸಭೆಯಿಂದಲೇ ಚರಂಡಿ ತೆರವುಗೊಳಿಸಿ, ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ ಎಂದರು.
ಸಹಾಯಕ ಆಯುಕ್ತ ಡಾ| ನಾಗರಾಜ್ ಎಲ್., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸದಸ್ಯರಾದ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶಪ್ರಸಾದ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ ಇನ್ನಿತರರು ಇದ್ದರು.