ವಿಜಯಪುರ: ಕೋವಿಡ್-19 ಸೋಂಕಿತರ ಸಂಖ್ಯೆ ವಿಜಯಪುರ ಜಿಲ್ಲೆಯಲ್ಲಿ ಶನಿವಾರ 20ಕ್ಕೆ ಏರಿದೆ. ವಿಜಯಪುರ ನಗರದ ಛಪ್ಪರಬಂದ್ ಪ್ರದೇಶದ 60 ವರ್ಷದ ವೃದ್ಧ (P-362) ರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಮೊದಲ ಸೋಂಕಿತೆ P-221 ಸಂಪರ್ಕದ ಪರಿಣಾಮವೇ 60 ವರ್ಷದ ವೃದ್ಧನಿಗೂ ಸೋಂಕು ತಗುಲಿರುವುದು ಸಾಬೀತಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20 ಕ್ಕೆ ಏರಿದ್ದು, ಇದರಲ್ಲಿ ಓರ್ವ ಮೃತಪಟ್ಟಿದ್ದಾನೆ. ಗಮನೀಯ ಅಂಶ ಎಂದರೆ P-221 ಸೋಂಕಿತೆಯಿಂದಲೇ ಈ ವರೆಗೆ ಜಿಲ್ಲೆಯಲ್ಲಿ 13 ಜನರಿಗೆ ಸೋಂಕು ಹರಡಿದೆ.
ಸದರಿ ಸೋಂಕಿತೆ ತನ್ನ ಪತಿ ಹಾಗೂ ಇತರೆ ಇಬ್ವರೊಂದಿಗೆ ಮಹಾರಾಷ್ಟ್ರದ ಈಚಲಕರಂಜಿ ಪಟ್ಟಣಕ್ಕೆ ಶವಸಂಸ್ಕಾರಕ್ಕೆ ಹೋಗಿ ಬಂದಿದ್ದಳು.
ಇದಲ್ಲದೇ ಮತ್ತೊಂದು ಕುಟುಂಬದ ಪ್ರಕರಣದಲ್ಲಿ ಮಹಾರಾಷ್ಟ್ರದ ಪುಣೆ ನಿವಾಸಿ ಸೋಂಕಿತ ಮಹಿಳೆಯಿಂದ ಸೋಂಕು ಹರಡಿದೆ. ಪುಣೆ ಮೂಲದ ಮಹಿಳೆ ತನ್ನ ತಂದೆಯ ಶವಸಂಸ್ಕಾರಕ್ಕೆ ನಗರಕ್ಕೆ ಬಂದಿದ್ದಳು. ಆಕೆಯೊಂದಿಗೆ ಬಂದಿದ್ದ ಆಕೆಯ ಮಕ್ಕಳು ನಗರದ ಛಪ್ಪರಬಂದ್ ಪ್ರದೇಶ ಮಕ್ಕಳೊಂದಿಗೆ ಆಟವಾಡಿದ ಕಾರಣಕ್ಕೆ ಸೋಂಕು ಹರಡಿದೆ.
ಈ ಪ್ರಕರಣದಲ್ಲಿ P-228 ಸಂಖ್ಯೆಯ 13 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ಈ ಮಗುವಿನ ಸಂಪರ್ಕದಿಂದ 7 ಜನರಿಗೆ ಸೋಂಕು ಹರಡಿದೆ.