Advertisement

ಜನಾಂದೋಲನ ಮಹಾಮೈತ್ರಿಯ 20 ಅಭ್ಯರ್ಥಿಗಳು ಕಣಕ್ಕೆ

12:17 PM Apr 17, 2018 | |

ಸಂಡೂರು: ವಿಧಾನಸಭೆಯಲ್ಲಿ ಜನರ ಸಮಸ್ಯೆ ಚರ್ಚಿಸಲು ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಜನರ ಬದುಕು ಹಸನುಗೊಳಿಸಲು ಜನಾಂದೋಲನಗಳ ಮಹಾಮೈತ್ರಿ ಈ ಬಾರಿ ರಾಜ್ಯದಲ್ಲಿ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ಮಹಾಮೈತ್ರಿ ಮುಖಂಡ ಎಸ್‌.ಆರ್‌. ಹಿರೇಮಠ ಹೇಳಿದರು.

Advertisement

ತಾಲೂಕಿನ ತಾರಾನಗರ ಗ್ರಾಮದಲ್ಲಿ ಮಹಾಮೈತ್ರಿ ಘಟಕ ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದಿಂದ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎ. ರಾಮಾಂಜನಪ್ಪ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಜನಪರ ಕಳಕಳಿ ಇಲ್ಲ, ಜನಹಿತ ಬಯಸುವ ಪಕ್ಷಗಳಲ್ಲ. ಸಂವಿಧಾನದ ಆಶಯಗಳ ಬಗ್ಗೆ ಈ ಪಕ್ಷಗಳಿಗೆ ಕಾಳಜಿ ಇಲ್ಲ, ಬಿಜೆಪಿ ಆಡಳಿತಾವಧಿಯಲ್ಲಿ ಬಿಹಾರದ ಲಾಲೂಪ್ರಸಾದ್‌ ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆಸಲಾಗುತ್ತಿದೆ. ಆದರೆ, ಓಬಳಾಪುರಂ, ಬೇಲಿಕೇರಿ ಮೊದಲಾದ ಗಣಿ ಹಗರಣಗಳ ಪ್ರಕರಣ ವಿಚಾರಣೆ ತ್ವರಿತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಗಣಿ ಕಂಪನಿಗಳಿಂದ ಸಂಗ್ರಹಿಸಿದ ಸುಮಾರು 13,000 ಕೋಟಿ ದುಡ್ಡು ಮಾನಿಟರಿಂಗ್‌ ಸಮಿತಿಯ ಬಳಿಯಿದೆ.

ಪರಿಸರ ಪುನರ್‌ ನಿರ್ಮಾಣ ಪುನಶ್ಚೇತನಗೊಳಿಸಲು ಸಮಗ್ರ ಯೋಜನೆ ಜಾರಿಗೊಳಿಸುತ್ತಿಲ್ಲ. ಈ ಹಣ ಮತ್ತು ಜಿಲ್ಲಾ ಖನಿಜ ನಿಧಿಯ ಹಣ ಸದುಪಯೋಗವಾಗಬೇಕಿದೆ. ತಾಲೂಕಿನ ಐತಿಹಾಸಿಕ ಶ್ರೀಕುಮಾರಸ್ವಾಮಿ ದೇವಸ್ಥಾನ ಸಂರಕ್ಷಣೆಗೆ ಸ್ಥಳೀಯರ ಸಂಘಟಿತ ಹೋರಾಟ ಅಗತ್ಯವಾಗಿದೆ. ಅದಕ್ಕಾಗಿ ಮಹಾಮೈತ್ರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಬೆಂಬಲಿಸುವಂತೆ ಮನವಿ ಮಾಡಿದರು.

ಮಹಾಮೈತ್ರಿ ಮುಖಂಡ ರಾಘವೇಂದ್ರ ಕುಷ್ಟಗಿ ಮಾತನಾಡಿ, ಈ ಪಕ್ಷಗಳು ಜನರ ಹಿತಾಸಕ್ತಿ ಕಾಪಾಡುವ ಬದಲು ಕಾರ್ಪೋರೇಟ್‌ ಹಿತಾಸಕ್ತಿಯನ್ನು ಕಾಯುತ್ತಿವೆ. ಅಕ್ರಮ ಗಣಿಗಾರಿಕೆಯ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆಗೆ ಪ್ರಕರಣದಲ್ಲಿ ಹೆಸರಿಸಲಾಗಿದ್ದ 700 ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಬದಲು ಬಡ್ತಿ ನೀಡುವ ಮೂಲಕ ವಚನ ಭ್ರಷ್ಟರಾಗಿದ್ದಾರೆ.

Advertisement

ಆನಂದಸಿಂಗ್‌, ನಾಗೇಂದ್ರ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಜಿಂದಾಲ್‌ ಕಂಪನಿಯ ಕಾರ್ಪೋರೇಟ್‌ ಸಾಮಾಜಿಕ ಜವಾಬ್ದಾರಿಯ ಹಣ ಆರ್‌. ವಿ. ದೇಶಪಾಂಡೆ ಅವರ ಕ್ಷೇತ್ರ ಹಳಿಯಾಳದಲ್ಲಿ ಬಳಕೆಯಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಎಸ್‌ಯುಸಿಐ ಅಭ್ಯರ್ಥಿ ಎ. ರಾಮಾಂಜೇನಪ್ಪ, ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ಸೋಮಶೇಖರ, ಚಂದ್ರಶೇಖರ ಮೇಟಿ, ಮಹಾರುದ್ರಗೌಡ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next