Advertisement

20 ಅಂಗನವಾಡಿಗಳಿಗೆ ಆರ್‌ಟಿಸಿ ಇಲ್ಲ!

11:39 PM Jun 20, 2019 | Team Udayavani |

ಪುತ್ತೂರು: ಪುತ್ತೂರು ತಾಲೂ ಕಿನಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು 370 ಅಂಗನವಾಡಿ ಕೇಂದ್ರಗಳ ಕೇಂದ್ರಗಳಿಗೆ ಸ್ವಂತ ಕಟ್ಟಡವಿದ್ದರೂ ನಿವೇಶನ ಇಲ್ಲದಾಗಿದೆ. ಅವುಗಳ ಆರ್‌ಟಿಸಿ (ಪಹಣಿ ಪತ್ರ) ಇನ್ನೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕೈ ಸೇರಿಲ್ಲ. 3 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡವನ್ನೂ ಹೊಂದಿಲ್ಲ.

Advertisement

ಪ್ರಾರಂಭದಲ್ಲಿ ತಾಲೂಕಿನ 22 ಅಂಗನವಾಡಿ ಕೇಂದ್ರಗಳಿಗೆ ಆರ್‌ಟಿಸಿ ಆಗಿರಲಿಲ್ಲ. ಆದರೆ ಬೊಬ್ಬೆಕೇರಿ ಹಾಗೂ ಇಡ್ಯಡ್ಕ ಅಂಗನವಾಡಿ ಕೇಂದ್ರಗಳಿಗೆ ಆರ್‌ಟಿಸಿ ಅಂತಿಮಗೊಂಡಿರುವ ಹಿನ್ನೆಲೆಯಲ್ಲಿ ಇನ್ನೂ 20 ಅಂಗನವಾಡಿ ಕೇಂದ್ರಗಳಿಗೆ ಆರ್‌ಟಿಸಿ ಆಗಬೇಕಿದೆ. ಈ ಎಲ್ಲ ಅಂಗನವಾಡಿ ಕೇಂದ್ರಗಳು ಪ್ರಸ್ತುತ ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಕಡಬ ತಾಲೂಕು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದರೆ ಬಹುತೇಕ ಕೇಂದ್ರಗಳು ಕಡಬಕ್ಕೆ ಸೇರುತ್ತವೆ.

ಸದ್ಯಕ್ಕೆ ಇವು ಪುತ್ತೂರು ಸಿಡಿಪಿಒ ವ್ಯಾಪ್ತಿಯಲ್ಲಿದ್ದರೂ ಅದರ ಆರ್‌ಟಿಸಿ ಪ್ರಕ್ರಿಯೆ ಪುತ್ತೂರು ಹಾಗೂ ಕಡಬ ತಹಶೀಲ್ದಾರ್‌ ವ್ಯಾಪ್ತಿಗೆ ಬರುತ್ತದೆ. ತಾಲೂಕಿನ 370 ಅಂಗನವಾಡಿ ಕೇಂದ್ರಗಳ ಪೈಕಿ ಮೂರಕ್ಕೆ ಮಾತ್ರ ಸ್ವಂತ ಕಟ್ಟಡ ಇಲ್ಲ. ಆರ್‌ಟಿಸಿ ಇಲ್ಲದೇ ಇರುವ 20 ಅಂಗನವಾಡಿ ಕೇಂದ್ರಗಳೂ ಸ್ವಂತ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿವೆ.

ಪ್ರಸ್ತುತ ಮಠ ಅಂಗನವಾಡಿ ಕೇಂದ್ರಕ್ಕೆ ಸ್ಥಳ ನಿಗದಿಯಾಗಿದ್ದು, ಸ್ವಂತ ಕಟ್ಟಡವಿಲ್ಲ. ಪಂಜಿಗುಡ್ಡೆ ಅಂಗನವಾಡಿ ಕೇಂದ್ರಕ್ಕೂ ಸ್ಥಳವಿದ್ದು, ಪ್ರಸ್ತುತ ಎರಡೂ ಅಂಗನವಾಡಿ ಕೇಂದ್ರಗಳ ಕಟ್ಟಡದ ಅನುದಾನಕ್ಕಾಗಿ ಕಡತವನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿದೆ. ಕುಟ್ರಾಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ವಾಳ್ಯ ಅಂಗನವಾಡಿ ಕೇಂದ್ರಕ್ಕೆ ದಾನಿಯೊಬ್ಬರು ನಿವೇಶನ ನೀಡಿದ್ದು, ಪ್ರಸ್ತುತ ಅದರ ಕಡತ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿದೆ.

ಕೇವಲ ಮೂರಕ್ಕೆ ಕಟ್ಟಡವಿಲ್ಲ
ಪುತ್ತೂರು ತಾಲೂಕಿನಲ್ಲಿರುವ ಒಟ್ಟು 370 ಅಂಗನವಾಡಿ ಕೇಂದ್ರ ಗಳ ಪೈಕಿ 367 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಮೂರು ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡವನ್ನು ಹೊಂದಿಲ್ಲ. ಉಪ್ಪಿನಂಗಡಿ ಸಮೀಪದ ಮಠ ಅಂಗನವಾಡಿ ಕೇಂದ್ರಕ್ಕೆ ಈ ಹಿಂದೆ ಸ್ವಂತ ಕಟ್ಟಡವಿತ್ತು. ಆದರೆ ಹೆದ್ದಾರಿ ವಿಸ್ತರಣೆ ಭೂಸ್ವಾಧೀನದ ಸಂದರ್ಭ ಕಟ್ಟಡವನ್ನು ಕೆಡವಲಾಗಿತ್ತು.

Advertisement

ಆರ್‌ಟಿಸಿ ಇಲ್ಲದ ಕೇಂದ್ರಗಳು
ತಾಲೂಕಿನ ಬಾಲವನ, ಕೂರ್ನಡ್ಕ-1, ಅಮ್ಚಿನಡ್ಕ, ಕುದ್ಕಾರು ಕೂರ, ಮಜ್ಜಾರಡ್ಕ, ಸರ್ವೆ, ತೆಂಕಿಲ, ಕೋಡಿಂಬಾಳ ಮುರಾಜೆ, ದೋಳ್ಪಾಡಿ ಕೂರೇಲು, ಮರ್ಧಾಳ ಕೆರ್ಮಾಯಿ, ಬಜತ್ತೂರು ಹೊಸಗದ್ದೆ, ಶಿರಾಡಿ ಪದಂಬಳ, ಗಾಳಿಬೆಟ್ಟು, ಮರ್ಧಾಳ, ಉಪ್ಪಿನಂಗಡಿ ಚರ್ಚ್‌, 34ನೇ ನೆಕ್ಕಿಲಾಡಿ ಸಂತೆಕಟ್ಟೆ, ನೆಲ್ಯಾಡಿ ಪೇಟೆ, ಕೌಕ್ರಾಡಿ ಕಟ್ಟೆಮಜಲು, ಐತ್ತೂರು 72 ಕಾಲನಿ ಹಾಗೂ ಐತೂರು ಎನ್‌ಕೂಪ್‌ ಅಂಗನವಾಡಿ ಕೇಂದ್ರಗಳಿಗೆ ಆರ್‌ಟಿಸಿ ಆಗುವುದಕ್ಕೆ ಬಾಕಿ ಇದೆ.

ತಹಶೀಲ್ದಾರ್‌ಗಳ ಜತೆ ಚರ್ಚೆ
ಒಟ್ಟು 22 ಅಂಗನವಾಡಿಗಳಿಗೆ ಆರ್‌ಟಿಸಿ ಬಾಕಿ ಇದೆ. ಪ್ರಸ್ತುತ 2 ಅಂಗನವಾಡಿ ಕೇಂದ್ರಗಳ ಆರ್‌ಟಿಸಿ ಪೂರ್ಣಗೊಂಡಿದೆ. ಉಳಿದ 20 ಆರ್‌ಟಿಸಿಗಳ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರ್‌ಗಳ ಬಳಿ ಚರ್ಚಿಸಿದ್ದೇನೆ. ಮೂರು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೂ ಪ್ರಯತ್ನಗಳು ನಡೆಯುತ್ತಿವೆ.
– ಭಾರತಿ ಜೆ.ಎ. ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಪ್ರಭಾರ), ಪುತ್ತೂರು

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next