Advertisement

ಕಲಬುರ್ಗಿ ಹತ್ಯೆಗೆ 2 ವರ್ಷ, ಪತ್ತೆಯಾಗದ ಹಂತಕರು

09:13 AM Aug 30, 2017 | |

ಧಾರವಾಡ: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇಂದು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಆದರೆ, ಮೂರು ದಶಕಗಳ ಹಿಂದೆಯೇ ಡಾ|ಎಂ.ಎಂ.ಕಲಬುರ್ಗಿ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ತಮ್ಮ ಬರಹ-ಸಂಶೋಧನೆಗಳ ಮೂಲಕ ಸಾಬೀತುಪಡಿಸಲು ಯತ್ನಿಸಿದ್ದು ವಿವಾದದ ಬಿರುಗಾಳಿಯನ್ನೇ ಎಬ್ಬಿಸಿತ್ತು. 

Advertisement

ಡಾ|ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿ ಇಂದಿಗೆ ಎರಡು ವರ್ಷಗಳು ಕಳೆದರೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವುದಕ್ಕೆ ಸರ್ಕಾರದಿಂದ ಸಾಧ್ಯವಾಗಿಲ್ಲ ಎನ್ನುವ ನೋವು ರಾಜ್ಯದ ಸಾಹಿತ್ಯ ಬಳಗದ್ದಾಗಿದೆ. ಇಂತಹ ಹತ್ಯೆಗೆ ತಕ್ಕ ಶಾಸ್ತಿ ಮಾಡಲು ಇರುವ ಮಾರ್ಗ ಯಾವುದು? ಅದನ್ನು ಹುಡುಕಬೇಕು ಎನ್ನುತ್ತಿದ್ದಾರೆ ಕೆಲವು ಸಾಹಿತಿಗಳು. ಆ.30, 2015 ರಂದು ಕಲ್ಯಾಣ ನಗರ ದಲ್ಲಿರುವ ತಮ್ಮ “ಸೌಜನ್ಯ’ ನಿವಾಸ ದಲ್ಲಿಯೇ ಹಂತಕರಿಂದ ಹತ್ಯೆಗೀಡಾದ ಕಲಬುರ್ಗಿ ಅವರನ್ನು ಕಳೆದ ವರ್ಷ ಸ್ಮರಿಸುವುದರೊಂದಿಗೆ ಶೀಘ್ರ ತನಿಖೆಗೆ ಆಗ್ರಹಿಸಿದ್ದ ರಾಷ್ಟ್ರಮಟ್ಟದ ಬುದ್ಧಿವಾದಿಗಳು
ಮತ್ತು ಚಿಂತಕರು ಈ ವರ್ಷ ಗದಗ ಜಿಲ್ಲೆಯಲ್ಲೊಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದಾರೆ.

ಕಲಬುರ್ಗಿ ಅವರ ಹಂತಕರ ಪತ್ತೆಗೆ ತನಿಖೆ ಚುರುಕುಗೊಂಡಿದ್ದು, ಶೀಘ್ರವೇ ಅವರನ್ನು ಬಂಧಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದರು.
ಆದರೆ, ಈವರೆಗೂ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಂದ ಇದನ್ನು ಕಾರ್ಯಗತಗೊಳಿಸಲು ಆಗಿಲ್ಲ ಎನ್ನುತ್ತಿದ್ದಾರೆ ಡಾ|ಕಲಬುರ್ಗಿ ಅವರ ಅಭಿಮಾನಿಗಳು. 

ಮೋದಿಗೂ ಮನವಿ: ಕಳೆದ ವರ್ಷ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸ್ವತಃ ಡಾ|ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಲ್ಲೂ ಈ ಕುರಿತು ಮಾತುಕತೆ ನಡೆಸಿದ್ದರು. ಡಾ|ಕಲಬುರ್ಗಿ ಹಂತಕರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರದಿಂದಲೂ ಈ ವರೆಗೂ ಯಾವುದೇ ಕೆಲಸವಾಗಿಲ್ಲ ಎನ್ನುವ ನೋವು ಡಾ| ಕಲಬುರ್ಗಿ ಕುಟುಂಬ ಸದಸ್ಯರಿಗಿದೆ. 

ಪ್ರತಿಕ್ರಿಯೆ ನೀಡಲ್ಲ..
ಪ್ರತಿ ಬಾರಿ ಕಲಬುರ್ಗಿ ಅವರ ಬಗ್ಗೆ ಏನಾದರೂ ಹೇಳಿಕೆ ನೀಡುತ್ತಿದ್ದ ಅವರ ಕುಟುಂಬ ಸದಸ್ಯರು ಈ ವರ್ಷ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಲ್ಯಾಣ ನಗರದಲ್ಲಿರುವ ಸೌಜನ್ಯ ನಿವಾಸಕ್ಕೆ ಅವರ ಪತ್ನಿ ಉಮಾದೇವಿ, ಮಗ ಶ್ರೀವಿಜಯ ಹಾಗೂ ಮಗಳು ಸೇರಿದಂತೆ ಬಂಧುಗಳು ಮಂಗಳವಾರ ಆಗಮಿಸಿದ್ದಾರೆ. ಮನೆಯಲ್ಲಿ ಪುಣ್ಯಸ್ಮರಣೆ ನಡೆಯುತ್ತಿದೆ. ಆದರೆ ಡಾ|ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ತಾವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

Advertisement

ಮರುಗುತ್ತಿದ್ದಾರೆ ಬಸವಾಭಿಮಾನಿಗಳು
ಸದ್ಯಕ್ಕೆ ತೀವ್ರ ಚರ್ಚೆಯಲ್ಲಿರುವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮತ್ತು ಚಳವಳಿಗೆ ಮೂಲಸೆಲೆಯಾಗಿದ್ದು ಡಾ|ಎಂ.ಎಂ.ಕಲಬುರ್ಗಿ ಅವರ ವಚನ ಸಂಶೋಧನೆ ಮತ್ತು ಅಧ್ಯಯನ. ಅವರು ತಮ್ಮ ದೈತ್ಯ ಬರಹ ಸಂಪುಟ ಮಾರ್ಗ ಕೃತಿಯಲ್ಲಿ ಶರಣರ ಜೀವನ, ಸತ್ಯ, ಮಿತ್ಯಗಳು, ವೀರಶೈವ ಪದ ಬಳಕೆ, ಪಂಚ ಪೀಠಾಧೀಶರ ಇತಿಹಾಸ, ಅವರ ಮೂಲ ಮತ್ತು ಲಿಂಗಾಯತರಲ್ಲಿನ ಉಪ ಜಾತಿಗಳೆಲ್ಲವನ್ನೂ ಅಧ್ಯಯನ ನಡೆಸಿ ಸಂಶೋಧನಾ ಬರಹ ಬರೆದಿದ್ದರು. ಅವರ ಮಾರ್ಗ ಕೃತಿಗೆ ಆವಾಗಲೇ ಕೆಲವರಿಂದ ತೀವ್ರ ವಿರೋಧ ವ್ಯಕ್ತವಾಗಿ ಪ್ರತಿಭಟನೆ, ಹೋರಾಟ ನಡೆದಿತ್ತು. ಹೀಗಾಗಿ ಇಂದು ತೀವ್ರ ಸ್ವರೂಪ ಪಡೆದಿರುವ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಡಾ|ಕಲಬುರ್ಗಿ ಅವರು ಇರಬೇಕಿತ್ತು. ಅವರು ಇದ್ದಿದ್ದರೆ ಹೋರಾಟಕ್ಕೆ ಆನೆ ಬಲ ಬರುತ್ತಿತ್ತು ಎಂದು ಅನೇಕರು ಮಮ್ಮಲ ಮರಗುತ್ತಿದ್ದಾರೆ.

ಅಹೋರಾತ್ರಿ ಧರಣಿ ಆರಂಭ
ಗದಗ: ಡಾ| ಎಂ.ಎಂ.ಕಲಬುರ್ಗಿ, ಡಾ| ನರೇಂದ್ರ ದಾಬೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಅವರ ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಡಾ| ಕಲಬುರ್ಗಿ, ಪಾನ್ಸರೆ ಹಾಗೂ ದಾಬೋಲ್ಕರ್‌ ಹತ್ಯಾ ವಿರೋಧಿ ಹೋರಾಟ ಸಮಿತಿಯಿಂದ ನಗರದ ಮಹಾತ್ಮ ಗಾಂಧಿ  ವೃತ್ತದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ಆರಂಭಗೊಂಡಿತು. ಅಹೋರಾತ್ರಿ ಧರಣಿ ಅಂಗವಾಗಿ ಬೆಳಗ್ಗೆ ನಗರದ ಬಸವೇಶ್ವರ ಕಾಲೇಜಿನಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next