ಚಾಮರಾಜನಗರ: ಅಪ್ರಾಪ್ತ ಬಾಲಕಿಯರಿಬ್ಬರನ್ನು ಪ್ರೀತಿಸಿ ಅವರನ್ನು ತಮಿಳುನಾಡಿಗೆ ಕರೆದೊಯ್ದು ಮದುವೆ ಮಾಡಿಕೊಂಡು, ದೈಹಿಕ ಸಂಪರ್ಕ ನಡೆಸಿದ ಇಬ್ಬರು ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಾರಾಗೃಹ ಶಿಕ್ಷೆ ತಲಾ 5.20 ಲಕ್ಷ ರೂ. ದಂಡ ವಿಧಿಸಿದೆ.
ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಠಾಣಾ ವ್ಯಾಪ್ತಿಯ ಪಿ.ಬಿ.ದೊಡ್ಡಿ ಗ್ರಾಮದ ಮಂಜು ಹಾಗೂ ಮುತ್ತುರಾಜ್ ಶಿಕ್ಷೆಗೊಳಗಾದ ಅಪರಾಧಿಗಳು.
ಈ ಇಬ್ಬರು ಯುವಕರು ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಪ್ರೀತಿಸುತ್ತಿದ್ದರು. ಇಬ್ಬರು ಯುವಕರು ಹಾಗೂ ಬಾಲಕಿಯರ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆಯುತ್ತಿತ್ತು. ಎರಡೂ ಜೋಡಿಗಳು ವಿವಾಹವಾಗುವ ಉದ್ದೇಶ ಹೊಂದಿ ತಮಿಳುನಾಡಿಗೆ ಹೋಗುವ ಬಗ್ಗೆ ಮಾತನಾಡಿಕೊಂಡಿದ್ದರು. 2016ರ ಜೂನ್ 13ರಂದು ರಾತ್ರಿ ಕೊಳ್ಳೇಗಾಲದವರೆಗೆ ಬೈಕ್‌ನಲ್ಲಿ ತೆರಳಿ, ಅಲ್ಲಿ ಬೈಕ್ ನಿಲ್ಲಿಸಿ, ಬಸ್‌ನಲ್ಲಿ ಪ್ರಯಾಣ ಮಾಡಿ, ಜೂ. 14ರಂದು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ತಾಲೂಕಿನ, ಬರ್ಲಿಯಾರ್ ಪಂಚಾಯಿತಿಗೆ ಸೇರಿದ ಗರೆನ್ಸಿ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ, ತಮಗೆ ಪರಿಚಯವಿದ್ದ ಆರ್ಮುಗಂ ಎಂಬುವವರ ಮನೆಗೆ ತೆರಳಿ, ತಾವು ಗಂಡ ಹೆಂಡತಿಯರು ಎಂದು ಸುಳ್ಳು ಹೇಳಿ ಅವರ ಮನೆಯಲ್ಲಿ ತಂಗಿದ್ದರು.
ಇದನ್ನೂ ಓದಿ :ಉಪ ಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಗೆಲ್ಲುತ್ತೇವೆ : ಬಸವರಾಜ ಬೊಮ್ಮಾಯಿ
ಜೂನ್ 15ರಂದು ಬೆಳಿಗ್ಗೆ 9ಗಂಟೆ ಸಮಯದಲ್ಲಿ ಗರೆನ್ಸಿ ಗ್ರಾಮದಲ್ಲಿರುವ ಮುನೇಶ್ವರ ದೇವಾಲಯದಲ್ಲಿ ಮಂಜು ಹಾಗೂ ಮುತ್ತು ತಮ್ಮ ಜೋಡಿಯೊಂದಿಗೆ ಕರಿಮಣಿ ಸರಕಟ್ಟಿ ಮದುವೆ ಮಾಡಿಕೊಂಡಿದ್ದರು. ಅದೇ ದಿನ ರಾತ್ರಿ ಪರಿಚಿತರಾದ ಆರ್ಮುಗಂ ಅವರ ಮನೆಯಲ್ಲಿ ತಂಗಿದ್ದು, ಮಂಜು ಹಾಗೂ ಮುತ್ತುರಾಜು ತಾವು ಮದುವೆಯಾಗಿದ್ದ ಬಾಲಕಿಯರೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದರು.
ಇದಾದ ಬಳಿಕ, ಇಬ್ಬರು ಬಾಲಕಿಯರ ಪೋಷಕರು, ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ರಾಮಾಪುರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಚ್ ಗೋವಿಂದರಾಜು ನ್ಯಾಯಾಲಯದಲ್ಲಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷೆನ್‌ಸ್ ನ್ಯಾಯಾಧೀಶರಾದ ಸದಾಶಿವ ಸುಲ್ತಾನ್‌ಪುರಿ ಅವರು ಸೋಮವಾರ ತೀರ್ಪು ನೀಡಿದ್ದಾರೆ. ಪೋಕ್ಸೋ ಕಾಯ್ದೆ ಕಲಂ 4ರ ಅನ್ವಯ ಮಂಜು ಮತ್ತು ಮುತ್ತುಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ತಲಾ 5.20 ಲಕ್ಷ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.