ನವದೆಹಲಿ: 2 ವಿಧದ 500 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿರುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಗಂಭೀರವಾಗಿ ಆರೋಪಿಸಿದ್ದು, ಇದರಿಂದಾಗಿ ಲೋಕಸಭೆಯಲ್ಲಿ ಭಾರೀ ಕೋಲಾಹಲ ನಡೆಯಿತು.
ಕೇಂದ್ರ ಸರ್ಕಾರ ಯಾಕೆ ನೋಟು ನಿಷೇಧದ ನಿರ್ಧಾರವನ್ನು ಕೈಗೊಂಡಿದೆ ಎಂಬುದು ಇಂದು ಮನವರಿಕೆಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ವಿಧದ 500 ರೂ. ನೋಟುಗಳನ್ನು ಮುದ್ರಿಸಿದೆ. ಇದು ಈ ಶತಮಾನದ ಅತಿ ದೊಡ್ಡ ಹಗರಣ ಎಂದು ಸಿಬಲ್ ವಾಗ್ದಾಳಿ ನಡೆಸಿದರು.
ರಾಜ್ಯ ಸಭಾ ಕಲಾಪದಲ್ಲಿ ಕಾಂಗ್ರೆಸ್ ಇಂದು 2 ವಿಧದ 500 ರೂಪಾಯಿಗಳ ಚಿತ್ರಗಳನ್ನು ಪ್ರದರ್ಶಿಸಿ, ಇದು ಬೇರೆ ಆಕಾರ ಮತ್ತು ರಚನೆಯನ್ನು ಹೊಂದಿರುವುದಾಗಿ ಆರೋಪಿಸಿದೆ.
ನಾವು ಆಡಳಿತ ನಡೆಸಿದ್ದೇವೆ. ಆದರೆ ನಾವು ಯಾವತ್ತೂ ಎರಡು ರೀತಿಯ ನೋಟುಗಳನ್ನು ಮುದ್ರಿಸಿಲ್ಲ. ಒಂದು ಪಕ್ಷದ್ದು, ಇನ್ನೊಂದು ಸರ್ಕಾರದ್ದು. ಎರಡು ರೀತಿಯ 500 ರೂ. ನೋಟು ಹಾಗೂ ಎರಡು ರೀತಿಯ 1000 ರೂ. ನೋಟುಗಳಿವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ ಹೇಳಿದರು.
ನೋಟುಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿ ಹೇಳಿಕೆಯನ್ನು ನೀಡುತ್ತಿರುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ತಿರುಗೇಟು ನೀಡಿದರು. ಪ್ರಮುಖವಾದ ವಿಷಯದ ಚರ್ಚೆ ನಡೆಯುತ್ತಿರುವಾಗ ಕಾಂಗ್ರೆಸ್ ಬೇಜವಾಬ್ದಾರಿಯುತ ಹೇಳಿಕೆ ನೀಡುವ ಮೂಲಕ ಶೂನ್ಯ ವೇಳೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.