ಬನಹಟ್ಟಿ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡದ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಎರಡು ಬಸ್‌ಗಳನ್ನು ಸ್ಥಳೀಯ ನ್ಯಾಯಾಲಯ ಜಪ್ತಿ ಮಾಡಿದೆ. 2015ರಲ್ಲಿ ರಬಕವಿ-ಬನಹಟ್ಟಿ ರಸ್ತೆಯ ಜ್ಞಾನೋದಯ ಶಾಲೆ ಹತ್ತಿರ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಓಡಿಸುತ್ತಿದ್ದ ರಬಕವಿಯ ಬಸವರಾಜ ಉಮದಿ ಎಂಬುವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ವಾದ-ವಿವಾದ ನಡೆದ ಬಳಿಕ 20-06-2018ರಂದು ಬನಹಟ್ಟಿಯ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ರೇಶ್ಮಾ ಗೋಣಿ, ಗಾಯಗೊಂಡ ವ್ಯಕ್ತಿ ಬಸವರಾಜ ಉಮದಿ ಅವರಿಗೆ ಒಟ್ಟು 1.25 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇನ್ನೂ ಪರಿಹಾರ ಬಾಕಿ ಉಳಿಸಿಕೊಂಡ ಕಾರಣ ಕೋರ್ಟ್ ಬೇಲಿಫ್ ಆರ್. ಎಸ್. ಅಕ್ಕಿಮರಡಿ ಚಿಕ್ಕೋಡಿ ಘಟಕದ 2 ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.