ಹೈದರಾಬಾದ್: ರಾಯಚೂರು ಬಳಿಯಿರುವ ರಾಜೋಳಿಬಂಡಾ ತಿರುವು ಯೋಜನೆಯಡಿ (ಆರ್ ಡಿಎಸ್) ಬ್ಯಾರೇಜ್‌ನಲ್ಲಿರುವ ತೆಲಂಗಾಣ ಪಾಲಿನ 3.5 ಟಿಎಂಸಿ ಪ್ರಮಾಣದ ನೀರಿನಲ್ಲಿ 1.5ರಿಂದ 2 ಟಿಎಂಸಿ ನೀರನ್ನು ಕರ್ನಾಟಕಕ್ಕೆ ನೀಡುವ ಭರವಸೆಯನ್ನು ತೆಲಂಗಾಣ ಸರ್ಕಾರ ನೀಡಿರುವುದಾಗಿ ರಾಜ್ಯ ಜಲ ಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಗುರುವಾರ ತೆಲಂಗಾಣದ ನೀರಾವರಿ ಸಚಿವ ಟಿ. ಹರೀಶ್ ರಾವ್ ಅವರನ್ನು ಭೇಟಿ ಮಾಡಿದ ಬಳಿಕ ಪಾಟೀಲ್ ಈ ವಿಚಾರ ತಿಳಿಸಿದರು.
ಸುದ್ದಿಗಾರರಿಗೆ ಭೇಟಿಯ ವಿವರ ನೀಡಿದ ಅವರು, “ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ತುಂಗಭದ್ರಾ ಆಧಾರಿತ ಕೃಷಿ ವಲಯಕ್ಕೆ ಹೆಚ್ಚಿನ ನೀರು ಬೇಕಿರುವುದರಿಂದ ಆರ್‌ಡಿಎಸ್‌ನಲ್ಲಿ ತೆಲಂಗಾಣ ಉಪಯೋಗಿಸದೇ ಇರುವ ನೀರನ್ನು ಬಳಸಿಕೊಳ್ಳಲು ತೆಲಂಗಾಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ.
ಮನವಿಗೆ ಸ್ಪಂದಿಸಿರುವ ಸಚಿವರು, ತಮ್ಮ ರಾಜ್ಯದ ಬೆಳೆಗಾರರ ಅಗತ್ಯಕ್ಕೆ ಬೇಕಾದಷ್ಟು ನೀರನ್ನು ಇಟ್ಟುಕೊಂಡು
ಉಳಿದ ನೀರನ್ನು (1.5ರಿಂದ 2 ಟಿಎಂಸಿ) ನೀರನ್ನು ನೀಡುವ ಭರವಸೆ ನೀಡಿದ್ದಾರೆ’ ಎಂದರು.