ಮಡಿಕೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಮಹಾಮಳೆಯಿಂದ ಉಂಟಾಗಿರುವ ನಷ್ಟವನ್ನು ಭರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ.ಗಳ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಕಳೆದ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಮನೆ ಕಳೆದುಕೊಂಡವರಿಗೆ 9.85 ಲಕ್ಷ ರೂ. ವೆಚ್ಚದಲ್ಲಿ ಅಂದಿನ ಮೈತ್ರಿ ಸರ್ಕಾರ ನಿರ್ಮಿಸಿಕೊಡಲು ಯೋಜನೆ ರೂಪಿಸಿತ್ತು. ಆದರೆ, ಇಂದಿನ ಬಿಜೆಪಿ ನೇತೃತ್ವದ ಸರ್ಕಾರ ಕೇವಲ 5 ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದು, ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಈ ಮೊತ್ತದಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂದರು.
ಅತಿವೃಷ್ಟಿಯಿಂದ ಕಡುಬಡವರು ಹಾಗೂ ಕೂಲಿ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. ಗದ್ದೆ ಮತ್ತು ಕಾಫಿ ತೋಟಗಳು ಕೂಡ ಜಲಾವೃತಗೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿಂದಿನ ಮೈತ್ರಿ ಸರ್ಕಾರ ರೈತರ ಸಾಲವನ್ನು 1 ಲಕ್ಷದವರೆಗೆ ಮನ್ನಾ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿತ್ತು. ಆದರೆ, ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು ಅಂದು ವಿರೋಧ ಪಕ್ಷದಲ್ಲಿದ್ದು ಒತ್ತಾಯಿಸುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗ ಯಾಕೆ ರೈತರ ಸಾಲಮನ್ನಾ ಮಾಡುತ್ತಿಲ್ಲವೆಂದು ಟಾಟು ಮೊಣ್ಣಪ್ಪ ಪ್ರಶ್ನಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲ್ಲಾ ಸಂಯೋಜಕ ತೆನ್ನೀರ ಮೈನಾ ಮಾತನಾಡಿ, 17 ಅನರ್ಹ ಶಾಸಕರ ಹಂಗಿನ ಅರಮನೆಯಲ್ಲಿರುವ ಬಿಜೆಪಿ ಸರ್ಕಾರ ಆಧುನಿಕ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡದ ಬಿಜೆಪಿ ಸರ್ಕಾರ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಚಿವ ಸಿ.ಟಿ. ರವಿ ಅವರು ಯೋಗ್ಯತೆ ಇದ್ದವರಿಗೆ ಮಂತ್ರಿ ಸ್ಥಾನ ದೊರೆತ್ತಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಕೊಡಗಿನ ಇಬ್ಬರು ಶಾಸಕರು ಅಯೋಗ್ಯರೇ ಎಂದು ಮೈನಾ ಪ್ರಶ್ನಿಸಿದರು. ಜಿಲ್ಲೆಯ ಜನ ಇನ್ನಾದರು ಎಚ್ಚೆತ್ತುಕೊಂಡು ನಿರ್ಲಕ್ಷ್ಯ ಮನೋಭಾವದ ಬಿಜೆಪಿಯನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮತ್ತೂಬ್ಬ ವಕ್ತಾರ ಬಿ.ಇ.ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ ಹಾಗೂ ಮುದ್ದುರಾಜು ಉಪಸ್ಥಿತರಿದ್ದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ, ಜಿಲ್ಲೆಯಲ್ಲಿ ಸುಮಾರು 549 ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ ಎಂದರು.
Related Articles
ಹೆಗ್ಗಡೆ ಬಳಿಗೆ ನಿಯೋಗ
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಗಡೆ ಅವರು ಪ್ರವಾಹ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ನಿಧಿಗೆ 25 ಕೋಟಿ ರೂ.ಗಳನ್ನು ನೀಡಿರುವುದು ಸ್ವಾಗತಾರ್ಹ. ಅದೇ ಪ್ರಕಾರವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂತ್ರಸ್ತ ಸಾಲಗಾರರ ಕನಿಷ್ಠ 20 ಸಾವಿರ ರೂ. ಸಾಲವನ್ನು ಮನ್ನಾ ಮಾಡಬೇಕೆಂದು ಮನವಿ ಮಾಡಿದರು. ಅತಿವೃಷ್ಟಿ ಹಾನಿಗೆ ಒಳಗಾದ ಜನ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇವರಿಗೆ ಧರ್ಮಾಧಿಕಾರಿಗಳು ವಿನಾಯಿತಿ ನೀಡುವ ಅಗತ್ಯವಿದೆ. ಸಾಲಮನ್ನಾ ಮಾಡುವಂತೆ ವೀರೇಂದ್ರ ಹೆಗಡೆ ಅವರ ಬಳಿ ಮನವಿ ಮಾಡಿಕೊಳ್ಳಲು ಜಿಲ್ಲಾ ಕಾಂಗ್ರೆಸ್‌ನಿಂದ ಧರ್ಮಸ್ಥಳಕ್ಕೆ ನಿಯೋಗ ತೆರಳಲಿದೆ ಎಂದರು.
Advertisement