ಹೈದರಾಬಾದ್: ತೆಲಂಗಾಣ ವಿಧಾನಸಭೆಯಲ್ಲಿರುವ 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಪಕ್ಷಕ್ಕೆ ಸೇರಿರುವುದನ್ನು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸಮರ್ಥಿಸಿಕೊಂಡಿದೆ. ಶಾಸಕರ ಮುಂದಿನ ರಾಜಕೀಯ ಭವಿಷ್ಯ ಮುಂದಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನ ದುಃಸ್ಥಿತಿಗೆ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯೇ ಕಾರಣ. ಅವರು ಪಕ್ಷವನ್ನು ಉತ್ತಮ ರೀತಿಯಲ್ಲಿ ಸಂಘಟನೆ ಮಾಡುತ್ತಿದ್ದರೆ, ಈ ಸ್ಥಿತಿ ಉಂಟಾಗುತ್ತಿರಲಿಲ್ಲ ಎಂದು ಪಕ್ಷದ ವಕ್ತಾರ ಅಬಿಡ್ ರಸೂಲ್ ಖಾನ್ ಶುಕ್ರವಾರ ತಿಳಿಸಿದ್ದಾರೆ. ಶಾಸಕರೇನೂ ಶಾಲಾ ಮಕ್ಕಳಲ್ಲ. ಟಿಆರ್‌ಎಸ್ ನೀಡುತ್ತಿರುವ ಉತ್ತಮ ಆಡಳಿತ, ಕಲ್ಯಾಣ ಕಾರ್ಯಕ್ರಮಗಳನ್ನು ಆಧರಿಸಿ ನಿರ್ಧಾರ ಕೈಗೊಂಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ: ಇನ್ನೊಂದೆಡೆ, 12 ಮಂದಿ ಶಾಸಕರ ಪಕ್ಷಾಂತರ ಖಂಡಿಸಿ ಶುಕ್ರವಾರ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಾರಂಗಲ್, ಕರೀಂನಗರ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿಎಂ ಚಂದ್ರಶೇಖರ್ ರಾವ್ ಅವರು ಪಕ್ಷಾಂತರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement