ಮಳವಳ್ಳಿ: ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಎರಡು ಪಂಪ್‌ಸೆಟ್‌ಗಳಿಗೆ ಒಂದು ಟೀಸಿ ಅಳವಡಿಸುವ ಯೋಜನೆ ರೂಪಿಸಿದ್ದು, ಅದನ್ನು ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಕಾವೇರಿ ನೀರಾವರಿ ನಿಗಮದ ವತಿಯಿಂದ ನೀರಾವರಿ ಇಲಾಖೆಯಲ್ಲಿ ಹಲವಾರು ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ನಂಜೇಗೌಡನದೊಡ್ಡಿ ಪಿಕಪ್ ನಾಲೆಯ ಕಾಮಗಾರಿಗೆ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ, ಕೋರೇಗಾಲ ಗ್ರಾಮದ ಪಿಕಪ್ ನಾಲೆ ಅಭಿವೃದ್ಧಿಗಾಗಿ 15 ಲಕ್ಷ ರೂ. ಕಿರುಗಾವಲು ಹೋಬಳಿ ನಂಜೇಗೌಡನದೊಡ್ಡಿ ಗ್ರಾಮದಲ್ಲಿ ಗಾಡಿ ಸೇತುವೆ ನಿರ್ಮಾಣ ಕಾಮಗಾರಿಗೆ 10 ಲಕ್ಷರೂ, ರಸ್ತೆ ಮತ್ತು ಸಿಸಿ ಡ್ರೈನೇಜ್‌ಗೆ 10 ಲಕ್ಷ ರೂ., ದೊಡ್ಡೇಗೌಡನಕೊಪ್ಪಲು ಗಾಡಿ ಸೇತುವೆ ಕಾಮಗಾರಿಗೆ 10 ಲಕ್ಷ ರೂ., ಹೂವಿನಕೊಪ್ಪಲು ಗ್ರಾಮದ ಮೈನರ್ ಗಾಡಿ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರೂ. ಬೆಳಕವಾಡಿಯಲ್ಲಿ 30 ಲಕ್ಷರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರೆವೇರಿಸಲಾಗಿದೆ ಎಂದು ಹೇಳಿದರು.
ನಾಲೆಗಳು ಅಭಿವೃದ್ಧಿಯಾಗಿಲ್ಲ, ಪಿಕಪ್ ನಾಲೆಗಳನ್ನು ಸರಿಯಾದ ರೀತಿಯಲ್ಲಿ ಅಭಿವೃದ್ಧಿಪಡಿಸಿಲ್ಲ ಎಂದು ರೈತರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಹಣ ಬಿಡುಗಡೆಗೊಳಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ರೈತರ ಹೊಲ ಗದ್ದೆಗಳಿಗೆ ಹೋಗಲು ಸಹಾಯವಾಗುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ಸಮರ್ಪಕ ನೀರು ಪೂರೈಕೆ ಮತ್ತು ಪೋಲಾಗುತ್ತಿರುವ ನೀರಿನ ಸೋರಿಕೆ ತಡೆಗಟ್ಟಲು ಗೇಟ್ ವಾಲ್‌ಗಳನ್ನು ಅಭಿವೃದ್ಧಿ ಪಡಿಸಲು ಆಗತ್ಯ ಕ್ರಮ ಕೈಗೊಳ್ಳಲಾಗಿದ್ದು, 25 ಕೋಟಿ ರೂ.ಗಳಿಗೂ ಹೆಚ್ಚು ಹಣ ನೀರಾವರಿ ಅನುಕೂಲಕ್ಕಾಗಿ ಬಿಡುಗಡೆಯಾಗಿದೆ ಎಂದರು.
ತಾಲೂಕಿನ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಾಗಿ 150 ಕೋಟಿರೂ ವೆಚ್ಚದಲ್ಲಿ ಅಂದಾಜು ವೆಚ್ಚ ಪಟ್ಟಿ ಸಿದ್ದಪಡಿಸಲಾಗಿದೆ. ಕಿರುಗಾವಲು ಹೋಬಳಿಯ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ತ್ವರಿತ ರೀತಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಇದೇ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಗೌಡ, ಪುರಸಭೆ ಸದಸ್ಯರಾದ ಸಿದ್ದರಾಜು, ನಂದಕುಮಾರ್, ಪೊತೆಂಡೆ ನಾಗರಾಜು, ಮಹೇಶ್, ಪ್ರಕಾಶ್, ಎಂಜಿನಿಯರ್ ರಾಮಚಂದ್ರ, ಬಸವರಾಜು, ಅಭಿ, ಕುಮಾರ್ ಮತ್ತಿತರರಿದ್ದರು.