ಎಚ್.ಡಿ.ಕೋಟೆ: ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ತಾಲೂಕು ಶೇ.82.56 ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಜಿಲ್ಲೆಗೆ 6 ಸ್ಥಾನ ಪಡೆದು, ಎರಡು ಸ್ಥಾನ ಕುಸಿತ ಕಂಡರೂ ಗುಣಮಟ್ಟದ ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ತಿಳಿಸಿದ್ದಾರೆ.
ಕಳೆದ ವರ್ಷ ಜಿಲ್ಲೆಗೆ 4ನೇ ಸ್ಥಾನ ಲಭಿಸಿದ್ದರಿಂದ ಶೈಕ್ಷಣಿಕ ವರ್ಷದ ಆರಂಭದಿಂದಲೂ ಪರೀಕ್ಷಾ ಪೂರ್ವ ತರಬೇತಿಗಳನ್ನು ಕ್ರಮ ಬದ್ಧªವಾಗಿ ನಮ್ಮ ಶಿಕ್ಷಕರು ನಡೆಸಿಕೊಂಡು ಬಂದಿದ್ದರು. ಇದರ ಜೊತೆಗೆ ತಾನು ಕೂಡ ಆಗಾಗ ಪ್ರತಿ ಶಾಲೆಗೂ ಭೇಟಿ ನೀಡಿ ಪರಿಶೀಲಿಸುತ್ತಿದ್ದೆ.
ಹೀಗಾಗಿ ನಾವು ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲ ಸ್ಥಾನದ ನಿರೀಕ್ಷೆಯಲ್ಲಿದ್ದೇವು. ನಮ್ಮ ನಿರೀಕ್ಷೆ ಹುಸಿಯಾಗಿದೆ. ಅದರೆ, ಒಟ್ಟಾರೆ ಫಲಿತಾಂಶದಲ್ಲಿ ಗುಣಮಟ್ಟದ ಫಲಿತಾಂಶ ಲಭಿಸಿದ್ದು, ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿ ಎಂ.ಸುಪ್ರಿತ್ ತಾಲೂಕಿಗೆ ಮೊದಲ ಸ್ಥಾನ ಪಡೆಯುವುದರ ಜತೆಗೆ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 93ನೇ ಸ್ಥಾನ: ತಾಲೂಕಿನಿಂದ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 3,074 ವಿದ್ಯಾರ್ಥಿಗಳು ಹಾಜರಾಗಿದ್ದು, 2538 (ಶೇ.82.56)ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ 6 ಸ್ಥಾನ ಲಭಿಸಿದರೆ, ರಾಜ್ಯದಲ್ಲಿ 93ನೇ ಸ್ಥಾನ ದೊರೆತಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಬಾರಿ ಹೆಚ್ಚಾಗಿ ತೇರ್ಗಡೆ ಹೊಂದಿದ್ದು, ಅದರಲ್ಲೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು (ಶೇ.78.90) ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು (ಶೇ.79.61) ಫಲಿತಾಂಶ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಶೇ.100 ಫಲಿತಾಂಶ ಪಡೆದ ಶಾಲೆಗಳು: ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯ, ಸೇಂಟ್ ಮೇರಿಸ್ ಪ್ರೌಢಶಾಲೆ, ಜ್ಞಾನಕೇಂದ್ರ ಪ್ರೌಢಶಾಲೆ ಹಾಗೂ ಸರಗೂರಿನ ಜೆಎಸ್‌ಎಸ್ ಅಂಗ್ಲ ಮಾಧ್ಯಮ ಶಾಲೆ, ಲಯನ್ಸ್ ಅಕಾಡೆಮಿ ಹೈಸ್ಕೂಲ್, ಹೊನ್ನಮ್ಮನಕಟ್ಟೆ ಸೆಂಟ್ ಥಾಮಸ್ ಅಂಗ್ಲ ಮಾಧ್ಯಮ ಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿವೆ ಎಂದು ತಿಳಿಸಿದರು.