ನೋಯ್ಡಾ: ಇಬ್ಬರು ವ್ಯಕ್ತಿಯಾಗಿ ತಮ್ಮ ಬಾಡಿಗೆ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಶನಿವಾರ (ಜ.11) ನಡೆದಿದೆ
ರಾತ್ರಿಯಿಡೀ ಉರಿಯುತ್ತಿರುವ ಒಲೆಯ ಮೇಲೆ ಚೋಲೆ (ಕಡಲೆ) ಪಾತ್ರೆಯನ್ನು ಬಿಟ್ಟಿದ್ದರಿಂದ ಆ ಜಾಗ ಹೊಗೆಯಿಂದ ತುಂಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಉಪೇಂದ್ರ (22) ಮತ್ತು ಶಿವಂ (23) ಎಂದು ಗುರುತಿಸಲಾಗಿದ್ದು, ಅವರು ಸೆಕ್ಟರ್ 70 ರ ಬಸಾಯಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇವರು ಚೋಲೆ ಕುಲ್ಚೆ ಮತ್ತು ಭಟುರಾ ಮಾರಾಟ ಮಾಡುವ ಆಹಾರದ ಬಂಡಿಯನ್ನು ನಡೆಸುತ್ತಿದ್ದರು. ಬೆಳಿಗ್ಗೆ ಅವರ ಚಿಕ್ಕ, ಸರಿಯಾಗಿ ಗಾಳಿ ಇಲ್ಲದ ಕೋಣೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲು ಒಡೆದು ಒಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಸೆಕ್ಟರ್ 39 ರಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಪೊಲೀಸರ ಪ್ರಕಾರ, ಆ ಪುರುಷರು ಮಲಗುವ ಮುನ್ನ ಗ್ಯಾಸ್ ಸ್ಟೌವ್ ಮೇಲೆ ಚೋಲೆ ಅಡುಗೆ ಪಾತ್ರೆಯನ್ನು ಇಟ್ಟಿದ್ದರು. ರಾತ್ರಿಯಿಡೀ ಒಲೆ ಉರಿಯುತ್ತಲೇ ಇತ್ತು. ಇದರಿಂದಾಗಿ ಆಹಾರ ಸುಟ್ಟುಹೋಗಿ ಕೋಣೆ ಹೊಗೆಯಿಂದ ತುಂಬಿತ್ತು.
“ಗಾಳಿ ಹೊರ ಹೋಗುವ ವ್ಯವಸ್ಥೆ ಇಲ್ಲದ ಕೋಣೆಯಲ್ಲಿ ಹೊಗೆ ಮತ್ತು ಇಂಗಾಲದ ಮಾನಾಕ್ಸೈಡ್ ಸಂಗ್ರಹವಾಗಿ ಉಸಿರುಗಟ್ಟುವಿಕೆಯೇ ಅವರ ಸಾವಿಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ನೋಯ್ಡಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.