ಇಟಾನಗರ: ಭಾರತ- ಚೀನಾ ಗಡಿ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿ 20 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾರ್ಮಿಕರ ಪೈಕಿ ಇಬ್ಬರು ಪತ್ತೆಯಾಗಿದ್ದು, ಉಳಿದ 10 ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
20 ದಿನಗಳ ಹಿಂದೆ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಭಾರತ-ಚೀನಾ ಗಡಿಯ ಬಳಿ 19 ಮಂದಿ ನಾಪತ್ತೆಯಾಗಿದ್ದರು.
ರಕ್ಷಿಸಲಾದ ಇಬ್ಬರು ಕಾರ್ಮಿಕರನ್ನು 27 ವರ್ಷದ ಖೋಲೆಬುದ್ದೀನ್ ಶೇಕ್ ಮತ್ತು 19 ವರ್ಷದ ಶಮಿದುಲ್ ಶೇಕ್ ಎಂದು ಗುರುತಿಸಲಾಗಿದೆ. ಅವರಿಬ್ಬರೂ ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ನಹರ್ಲಾಗುನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕುರುಂಗ್ ಕುಮೇ ಜಿಲ್ಲೆಯ ಡೆಪ್ಯುಟಿ ಕಮಿಷನರ್ ಬೆಂಗಿಯಾ ನಿಘೀ ಮಾಹಿತಿ ನೀಡಿದರು.
ಸ್ಥಳದಲ್ಲಿ ವಿಷಕಾರಿ ಹಾವುಗಳ ಓಡಾಟದ ಕಾರಣದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಡರಾತ್ರಿ ಕಾರ್ಯಾಚರಣೆಯನ್ನು ನಿಲ್ಲಿಸಿತು. ನಾಪತ್ತೆಯಾಗಿರುವ 9 ಕಾರ್ಮಿಕರಿಗಾಗಿ ಸೋಮವಾರ ಶೋಧ ಕಾರ್ಯಾಚರಣೆ ಪುನರಾರಂಭವಾಗಲಿದೆ.
ಇದನ್ನೂ ಓದಿ:ಜಾಯಿಂಟ್ ಥಿಯೇಟರ್ ಕಮಾಂಡ್ ಶೀಘ್ರ ಅಸ್ತಿತ್ವಕ್ಕೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘೋಷಣೆ
ಪ್ರತಿಕೂಲ ಹವಾಮಾನದಿಂದಾಗಿ ಭಾರತೀಯ ವಾಯುಪಡೆ (ಐಎಎಫ್) ಹೆಲಿಕಾಪ್ಟರ್ ಭಾನುವಾರ ಕಾರ್ಯಾಚರಣೆಯಲ್ಲಿ ತೊಡಗಿಲ್ಲ ಎಂದು ಅವರು ಹೇಳಿದರು.
ಜುಲೈ 5 ರಂದು ರಾತ್ರಿ ಹುರಿಯಲ್ಲಿನ ತಮ್ಮ ಪ್ರಾಜೆಕ್ಟ್ ಸೈಟ್ ನಿಂದ ತಪ್ಪಿಸಿಕೊಂಡ 19 ಕಾರ್ಮಿಕರು ವಿಷಕಾರಿ ಹಾವುಗಳು ಮತ್ತು ಕಾಡು ಪ್ರಾಣಿಗಳಿಂದ ಮುತ್ತಿಕೊಂಡಿರುವ ದಟ್ಟವಾದ ಅರಣ್ಯವನ್ನು ಪ್ರವೇಶಿಸಿದ್ದರು. ಅಲ್ಲಿಂದ ತಮ್ಮನ್ನು ಎಂಟು ಮತ್ತು 11 ಜನರ ಎರಡು ಗುಂಪುಗಳಾಗಿ ವಿಭಜಿಸಿಕೊಂಡು ಭಿನ್ನ ದಿಕ್ಕಿನೆಡೆಗೆ ಸಾಗಿದ್ದರು.