ಉತ್ತರಪ್ರದೇಶ: ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ನಂತರ ಪರಾರಿಯಾಗಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಯನ್ನು ಬಂಧಿಸುವ ಪ್ರಯತ್ನವನ್ನು ಉತ್ತರ ಪ್ರದೇಶ ಪೊಲೀಸರು ತೀವ್ರಗೊಳಿಸಿದ್ದಾರೆ.
ಇದೀಗ ವಿಕಾಸ್ ದುಬೆಯ ಇಬ್ಬರು ಆಪ್ತ ಸಹಾಯಕರಾದ ಪ್ರಭಾತ್ ಮಿಶ್ರಾ ಮತ್ತು ಪ್ರವೀಣ್ ದುಬೆ ಅವರನ್ನು ಪೊಲೀಸರು ಎನ್ ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ.
ಪ್ರವೀಣ್ ದುಬೆ ಎಂಬಾತ ಕಾರು ಒಂದನ್ನು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳು ಯತ್ನಿಸಿದ್ದ. ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಬಂಧನವಾಗಿದ್ದ ದುಬೆ ಸಹಚರ ಪ್ರಭಾತ್ ಮಿಶ್ರಾ ಅವರನ್ನು ಕಾನ್ಪುರಕ್ಕೆ ಕರೆತರುವ ವೆಳೆ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದಾಗ ಎನ್ ಕೌಂಟರ್ ಮಾಡಲಾಗಿದೆ.
ಇದನ್ನೂ ಓದಿ:ಕೊನೆಗೂ ಸಿಕ್ಕಿ ಬಿದ್ದ ಎಂಟು ಕಾನ್ಪುರ ಪೊಲೀಸರ ಹತ್ಯೆ ಆರೋಪಿ ವಿಕಾಸ್ ದುಬೆ!
ಕಾನ್ಪುರಕ್ಕೆ ತೆರಳುವ ಮಾರ್ಗದಲ್ಲಿ ವಾಹನ ಪಂಕ್ಚರ್ ಆಗಿದ್ದರಿಂದ ಪೊಲೀಸ್ ಸಿಬ್ಬಂದಿ ಟೈರ್ ಬದಲಾಯಿಸುತ್ತಿದ್ದರು. ಈ ವೆಳೆ ಮಿಶ್ರಾ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನನ್ನು ಹೊಡೆದುರುಳಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಭಾತ್ ಮಿಶ್ರಾ ಬಳಿಯಿದ್ದ 9 ಎಂಎಂ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ 2 ಮತ್ತು 3ರ ಮಧ್ಯರಾತ್ರಿ ಪೊಲೀಸರ ತಂಡದ ಮೇಲೆ ಹಲ್ಲೆ ನಡೆಸಿದ 15 ಜನರಲ್ಲಿ ಈತನೂ ಕೂಡ ಸೇರಿದ್ದ. ದುಬೆ ಮತ್ತು ಮಿಶ್ರಾ ಇಬ್ಬರ ಕುರಿತು ಮಾಹಿತಿ ನೀಡಿದವರಿಗೆ ತಲಾ 50,000 ರೂ.ನಗದು ಬಹುಮಾನ ಘೋಷಿಸಲಾಗಿತ್ತು.
ಇದರೊಂದಿಗೆ, ಕಾನ್ಪುರ ಗುಂಡಿನ ಚಕಮಕಿಯಲ್ಲಿ ಭಾಗಿಯಾದ ಐವರು ಅಪರಾಧಿಗಳನ್ನು ಎನ್ ಕೌಂಟರ್ ಮಾಡಲಾಗಿದೆ. ಬುಧವಾರ ಬೆಳಿಗ್ಗೆ (8-07-2020) ಉತ್ತರಪ್ರದೇಶ ವಿಶೇಷ ಪೋಲಿಸರ ತಂಡವು ವಿಕಾಸ್ ದುಬೆಯ ಆಪ್ತ ಸಹಚರ ಅಮರ್ ದುಬೆಯನ್ನು ಎನ್ ಕಂಟರ್ ಮಾಡಿತ್ತು.