Advertisement

ಟರ್ಕಿ ಭೂಕಂಪನ: 128 ಗಂಟೆಗಳ ಬಳಿಕ ಅವಶೇಷಗಳಡಿಯಿಂದ ಬದುಕಿ ಬಂದ ಹಸುಗೂಸು

10:35 AM Feb 12, 2023 | keerthan |

ಅಂಕಾರ: 28,000 ಜನರ ಸಾವು, 6,000 ಕಟ್ಟಡಗಳ ಕುಸಿತ, ಸಾವಿರಾರು ಜನರಿಗೆ ಗಾಯ.. ಹೀಗೆ ಮುಂದುವರಿಯುತ್ತದೆ ಟರ್ಕಿ ಭೂಕಂಪದಿಂದ ಉಂಟಾದ ಅನಾಹುತಗಳ ಪಟ್ಟಿ. ಕಳೆದ ಸೋಮವಾರ ಉಂಟಾದ 7.8 ತೀವ್ರತೆಯ ಭೂಕಂಪನದ ಬಳಿಕ ಟರ್ಕಿ ದೇಶ ಅಕ್ಷರಶಃ ನಲುಗಿ ಹೋಗಿದೆ. ಆದರೆ ಇಷ್ಟೆಲ್ಲಾ ದುಖಃದ ಸಂಗತಿಗಳ ನಡುವೆ ಆಶಾದಾಯಕ ಎನ್ನುವಂತಹ ಘಟನೆಯೊಂದು ನಡೆದಿದೆ.

Advertisement

ಭೂಕಂಪನದಲ್ಲಿ ಅವಶೇಷಗಳಡಿ ಸಿಲುಕಿದ್ದ ಎರಡು ತಿಂಗಳ ಮಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಲಾಗಿದೆ. ಘಟನೆ ನಡೆದು ಬರೋಬ್ಬರಿ 128 ಗಂಟೆಗಳ ಬಳಿಕ ಈ ಮಗುವನ್ನು ರಕ್ಷಣೆ ಮಾಡಲಾಗಿದೆ.

ಹೆಪ್ಪುಗಟ್ಟುವ ಹವಾಮಾನದ ಹೊರತಾಗಿಯೂ ಸಾವಿರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಅವಶೇಷಗಳ ನಡುವೆ ಸಿಲುಕಿಕೊಂಡವರನ್ನು ಹುಡುಕುತ್ತಿದ್ದಾರೆ.

ಭೂಕಂಪದ ಐದು ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ ಎರಡು ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.

ಪಾರಾದರೂ ಸಾವು: ಟರ್ಕಿಯ ಕಿರಿಕಾನ್‌ ಎಂಬಲ್ಲಿ ಅವಶೇಷಗಳ ಎಡೆಯಲ್ಲಿ 104 ಗಂಟೆಗಳ ಕಾಲ ಸಿಕ್ಕಿ ಹಾಕಿದ್ದ 40 ವರ್ಷದ ಮಹಿಳೆಯನ್ನು ಪಾರು ಮಾಡಲಾಗಿತ್ತು. ದುರಂತದ ವಿಚಾರವೆಂದರೆ, ಆಕೆ ಶನಿವಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಈ ಅಂಶ ಜಗತ್ತಿನಾದ್ಯಂತ ವೈರಲ್‌ ಆಗಿದೆ.

Advertisement

25,000 ದಾಟಿದ ಸಾವಿನ ಸಂಖ್ಯೆ: ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದಾಗಿ ಸಾವಿನ ಸಂಖ್ಯೆ 25 ಸಾವಿರ ದಾಟಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅಂದಾಜು 12,141 ಕಟ್ಟಡಗಳು ನಾಶವಾಗಿವೆ. ಭೂಕಂಪದಿಂದಾಗಿ ಟರ್ಕಿಯ ಈಶಾನ್ಯ ಭಾಗದಿಂದ ಮೆಡಿಟರೇನಿಯನ್‌ ಸಮುದ್ರದವರೆಗಿನ ಭಾಗದವರೆಗೆ 300 ಕಿ.ಮೀ. ವರೆಗೆ ಬಿರುಕು ಬಿಟ್ಟಿರುವ ಬಗ್ಗೆ ಐರೋಪ್ಯ ಒಕ್ಕೂಟದ ಉಪಗ್ರಹ ಸೆಂಟಿನೆಲ್‌-1 ದೃಢಪಡಿಸಿದೆ.

ಯಶಸ್ವಿ ಸರ್ಜರಿ: ಭೂಕಂಪದಿಂದ ಜರ್ಝರಿತವಾಗಿರುವ ಟರ್ಕಿಯ ಹತೇ ಪ್ರಾಂತ್ಯದ ಇಸ್ಕಂದರೂನ್‌ ಎಂಬ ನಗರದಲ್ಲಿ ಭಾರತೀಯ ಸೇನೆ ಕೇವಲ ಐದು ಗಂಟೆಗಳ ಅವಧಿಯಲ್ಲಿ ನಿರ್ಮಿಸಿದ ಆಸ್ಪತ್ರೆಯಲ್ಲಿ ಗ್ಯಾಂಗ್ರಿನ್‌ ಆಗಿರುವ ವ್ಯಕ್ತಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆತನನ್ನು ಅವಶೇಷಗಳ ಎಡೆಯಿಂದ 96 ಗಂಟೆಗಳ ಬಳಿಕ ಭಾರತೀಯ ಯೋಧರು ರಕ್ಷಿಸಿದ್ದರು. ನಂತರ ಆತನಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು ಎಂದು ಭಾರತೀಯ ತಂಡದ ಹಿರಿಯ ಅಧಿಕಾರಿ ಲೆ.ಕ. ವಿಪಿನ್‌ “ಎನ್‌ಡಿಟಿವಿ’ಗೆ ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಕೂಡ “ಹಿಂದುಸ್ತಾನಕ್ಕೆ ಧನ್ಯವಾದ’ “ಭಾರತೀಯ ಸೇನೆಗೆ ಥ್ಯಾಂಕ್ಸ್‌’ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next