ಜೈಪುರ: ಒಂದೇ ದಿನ ಇಬ್ಬರು ಎಂಬಿಬಿಎಸ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿರುವುದು ವರದಿಯಾಗಿದೆ.
ಉದಯಪುರ ಮೂಲದ ಎಂಬಿಬಿಎಸ್ ಆಕಾಂಕ್ಷಿ ಮೆಹುಲ್ ವೈಷ್ಣವ್ (18) ಮಂಗಳವಾರ ಬೆಳಿಗ್ಗೆ ವಿಜ್ಞಾನ ನಗರ ಪ್ರದೇಶದ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಕಳೆದ ಎರಡು ತಿಂಗಳಿನಿಂದ ವಿದ್ಯಾರ್ಥಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿಯನ್ನು ನಡೆಸುತ್ತಿದ್ದ ಮೆಹುಲ್ ವೈಷ್ಣವ್ ರಾತ್ರಿಯ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅವರ ಹಾಸ್ಟೆಲ್ ಮೇಟ್ಸ್ ಅವರ ಜೊತೆ ಇರಲಿಲ್ಲ. ಅವರ ಸ್ನೇಹಿತರು ಮೆಹುಲ್ ತುಂಬಾ ಸಮಯದಿಂದ ಕೋಣೆಯ ಹೊರಗೆ ಬಾರದಿದ್ದಾಗ ಸಿಬ್ಬಂದಿಯನ್ನು ಕರೆದಿದ್ದಾರೆ. ಬಾಗಿಲು ಒಡೆದು ನೋಡಿದಾಗ ಮೆಹುಲ್ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ. ಘಟನಾ ಸ್ಥಳದಿಂದ ಯಾವುದೇ ಪತ್ರ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Actor: 5 ತಿಂಗಳ ಹಿಂದೆ ಪರ್ವತದಲ್ಲಿ ನಾಪತ್ತೆಯಾಗಿದ್ದ ಖ್ಯಾತ ನಟ ಅಸ್ಥಿಪಂಜರವಾಗಿ ಪತ್ತೆ
ಅದೇ ದಿನ (ಜೂ.27 ರಂದು) ಮತ್ತೊಬ್ಬ ಎಂಬಿಬಿಎಸ್ ಆಕಾಂಕ್ಷಿ ಆದಿತ್ಯ ಎನ್ನುವವನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಕೋಚಿಂಗ್ ವಿದ್ಯಾರ್ಥಿ ಆದಿತ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆದಿತ್ಯ ಎರಡು ತಿಂಗಳ ಹಿಂದೆ ಕೋಟಾಕ್ಕೆ ಬಂದಿದ್ದ.
ಕಳೆದ ಎರಡು ತಿಂಗಳಿನಲ್ಲಿ ಕೋಟಾದಲ್ಲಿ 9 ಮಂದಿ ವಿದ್ಯಾರ್ಥಿಗಳು ಇದೇ ರೀತಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ಐದು ಪ್ರಕರಣಗಳು ಮೇ ತಿಂಗಳಲ್ಲಿ ವರದಿಯಾಗಿವೆ ಮತ್ತು ನಾಲ್ಕು ಪ್ರಕರಣಗಳು ಜೂನ್‌ನಲ್ಲಿ ವರದಿಯಾಗಿದೆ.
ಮೃತ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ತೆಗೆದುಕೊಂಡ ಇಂತಹ ಕ್ರಮಗಳ ಹಿಂದಿನ ಕಾರಣಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಒತ್ತಡವನ್ನು ಎದುರಿಸುತ್ತಿದ್ದಾರೆಯೇ ಎಂಬ ಬಗ್ಗೆ ಕಾಲೇಜು/ಸಂಸ್ಥೆಯ ಅಧಿಕಾರಿಗಳಿಂದ ಯಾವ ಪ್ರತಿಕ್ರಿಯಯೂ ಇದುವರೆಗೆ ಬಂದಿಲ್ಲ.