ಬೆಂಗಳೂರು: ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾಗುತ್ತಿದ್ದಂತೆ ಪಕ್ಷದ ಶಾಸಕರನ್ನು ನೇರವಾಗಿ ರೆಸಾರ್ಟ್‌ಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದರಿಂದ ನ್ಯಾಷನಲ್ ಟ್ರಾವೆಲ್ ಮಾಲೀಕರಾಗಿರುವ ಜಮೀರ್ ಅಹಮದ್ ಅವರ ಮೂಲಕ ಎರಡು ಐಶಾರಾಮಿ ಬಸ್‌ಗಳನ್ನು ತರಿಸಲಾಯಿತು. ಸಭೆ ಮುಗಿದ ತಕ್ಷಣ ಬಹುತೇಕ ಶಾಸಕರು ಬಟ್ಟೆ ತರಲು ಶಾಸಕರ ಭವನಕ್ಕೆ ತೆರಳಿದ್ದರಿಂದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಶಾಸಕರ ಭವನಕ್ಕೆ ತೆರಳಿದ್ದ ಶಾಸಕರನ್ನು ಕರೆದುಕೊಂಡು ಬಸ್‌ನಲ್ಲಿ ಕೂಡಿಸುವಂತೆ ಸೂಚನೆ ನೀಡಿದರು.
ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಇಂತದ್ದೇ ಪರಿಸ್ಥಿತಿ ಉದ್ಭವಿಸಿದ್ದಾಗ ಜಮೀರ್ ಅಹಮದ್, ಪಾರ್ಟಿ ಕೆ ಲಿಯೆ ಕುಚ್ ಬೀ ಕರ್ತಾ ಎಂದು ಸ್ವತ: ರಾಜಭವನಕ್ಕೆ ನ್ಯಾಷನಲ್ ಟ್ರಾವೆಲ್ಸ್ ಬಸ್ ಚಾಲನೆ ಮಾಡಿಕೊಂಡು ಹೋಗಿದ್ದರು. ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಅವರದೇ ಮಾಲೀಕತ್ವದ ಬಸ್‌ನಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಂದರ್ಭ ಎದುರಾಗಿದೆ.
ಬಿಜೆಪಿಯ ಲೆಕ್ಕಾಚಾರ ಫಲ ನೀಡುತ್ತಾ?: ಪ್ರಸ್ತುತ ಬಿಜೆಪಿಗೆ ತನ್ನ 104 , 2 ಪಕ್ಷೇತರರು ಸೇರಿ 106 ಶಾಸಕರ ಬಲವಿದೆ. ಕಾಂಗ್ರೆಸ್‌ನಲ್ಲಿ ಜೆಡಿಎಸ್-ಬಿಎಸ್‌ಪಿ ಸೇರಿ 118 ಬಲವಿದೆ. ಒಂದೊಮ್ಮೆ ನಾಲ್ವರು ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ 114ಕ್ಕೆ ಇಳಿಯಲಿದೆ. ನಂತರ, ಎರಡನೇ ಹಂತದಲ್ಲಿ ಸದನದಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭ ಎದುರಾದರೆ 8 ಮಂದಿ ವಿಪ್ ಉಲ್ಲಂ ಸಿ ಮತ ಹಾಕಲಿದ್ದಾರೆ ಎಂಬುದು ಬಿಜೆಪಿ ನಾಯಕರ ವಾದ. ಇನ್ನೊಂದೆಡೆ, ಕಾಂಗ್ರೆಸ್-ಜೆಡಿಎಸ್ ಸಂಖ್ಯಾಬಲ 106ಕ್ಕೆ ಇಳಿದು ಬಿಜೆಪಿಯ ಬಲ 112ಕ್ಕೆ ಏರಲಿದೆ ಎಂಬ ಲೆಕ್ಕಾಚಾರವಿದೆ. ನಾಲ್ಕು ಶಾಸಕರ ಜತೆಗೆ ಇನ್ನೂ ಆರು ಶಾಸಕರು ರಾಜೀನಾಮೆ ನೀಡಿದರೂ ಸರ್ಕಾರದ ಬಲ 108ಕ್ಕೆ ಇಳಿಯಲಿದೆ. ಆಗ ಮ್ಯಾಜಿಕ್ ನಂಬರ್ 113ಕ್ಕೆ 5 ಕಡಿಮೆಯಾಗಲಿದೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಬಿಜೆಪಿ, ರಾಜ್ಯಪಾಲರ ಮೊರೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಸದನದಲ್ಲಿ ಬಹುಮತ ಸಾಬೀತು ಸಂದರ್ಭದಲ್ಲಿ ಅಲ್ಲಿರುವ ಸಂಖ್ಯಾಬಲದ ಆಧಾರದ ಮೇಲೆಯೇ ಬಹುಮತ ನಿರ್ಧಾರ ಆಗುವುದರಿಂದ ಬಿಜೆಪಿಯ ಲೆಕ್ಕಾಚಾರ ಫಲ ನೀಡುತ್ತಾ ಎಂಬ ಅನುಮಾನವೂ ಇದೆ. ಏನೇ ಆದರೂ ಸರ್ಕಾರ ಪತನವಾಗಬೇಕಾದರೆ ಕನಿಷ್ಠ 18 ಶಾಸಕರು ರಾಜೀನಾಮೆ ನೀಡಲೇಬೇಕು. ಅಷ್ಟು ಸಂಖ್ಯೆ ಸಾಧ್ಯವಾ ಎಂಬ ಪ್ರಶ್ನೆಯೂ ಇದೆ.
ಮುಂಬೈನದ್ದು ಐಶಾರಾಮಿ ರೆಸಾರ್ಟ್
ಕಾಂಗ್ರೆಸ್ ಅತೃಪ್ತ ಶಾಸಕರ ವಾಸ್ತವ್ಯಕ್ಕೆ ಮುಂಬೈನ ಮ್ಯಾರಿಯೆಟ್ ಗ್ರೂಪ್‌ನ ರೇನಿಸನ್ಸ್ ಹೋಟೆಲ್‌ನಲ್ಲಿ 15 ಕೊಠಡಿಗಳನ್ನು ಬುಕ್ ಮಾಡಲಾಗಿತ್ತು. ಆದರೆ, ಕೇವಲ 6 ಜನ ಮಾತ್ರ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿ ರೂಮಿಗೆ 20 ಸಾವಿರ ಬಾಡಿಗೆ ನೀಡಲಾಗಿದೆ ಎನ್ನಲಾಗುತ್ತಿದ್ದು, ಒಂದು ಕಪ್ ಚಹಾದ ಬೆಲೆ 350 ರೂ.ಎಂದು ಹೇಳಲಾಗುತ್ತಿದೆ.
700 ಕೊಠಡಿಗಳನ್ನು ಹೊಂದಿರುವ ಐಶಾರಾಮಿ ಹೋಟೆಲ್‌ನಲ್ಲಿ ವಿದೇಶಿ ಪ್ರಜೆಗಳೇ ಹೆಚ್ಚಾಗಿ ವಾಸ್ತವ್ಯ ಹೂಡುತ್ತಾರೆ ಎಂದು ತಿಳಿದು ಬಂದಿದೆ. ಸದ್ಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಉಮೇಶ್ ಜಾಧವ್ ಹಾಗೂ ಬಿ.ನಾಗೇಂದ್ರ ವಾಸ್ತವ್ಯ ಹೂಡಿದ್ದಾರೆ. ಅವರೊಂದಿಗೆ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹಾಗೂ ಮಾಜಿ ಶಾಸಕ ನೆಲಮಂಗಲ ನಾಗರಾಜ್ ಇದ್ದಾರೆ ಎಂದು ತಿಳಿದು ಬಂದಿದೆ.