ಜಾರ್ಖಂಡ್: ಮುಂಬೈ-ಹೌರಾ ಮೇಲ್‌ನ 18 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಮುಂಜಾನೆ ಜಾರ್ಖಂಡ್‌ನಲ್ಲಿ ಸಂಭವಿಸಿದೆ.
ಹೌರಾ – ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ಬೆಳಗಿನ ಜಾವ 3.45ರ ಸುಮಾರಿಗೆ ಜಮ್‌ಶೆಡ್‌ಪುರದಿಂದ 80 ಕಿಮೀ ದೂರದಲ್ಲಿರುವ ಬಡಬಾಂಬೂ ಬಳಿ ಹಳಿತಪ್ಪಿದೆ. ಹಳಿ ತಪ್ಪಿದ ಬಗ್ಗೆ ಮಾಹಿತಿ ನೀಡಿದ ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಹೌರಾ-ಮುಂಬೈ ಮೇಲ್‌ನ 18 ಕೋಚ್‌ಗಳು ಬಾರಾಬಾಂಬೂ ಬಳಿ ಹಳಿತಪ್ಪಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ಎನ್‌ಡಿಆರ್‌ಎಫ್ ತಂಡವು ಸ್ಥಳಕ್ಕೆ ಧಾವಿಸಿದೆ ಎಂದು ಅಪಘಾತ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪಶ್ಚಿಮ ಸಿಂಗ್‌ಭೂಮ್ ಉಪ ಆಯುಕ್ತ ಕುಲದೀಪ್ ಚೌಧರಿ ಪಿಟಿಐಗೆ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಗೂಡ್ಸ್ ರೈಲು ಕೂಡ ಹಳಿತಪ್ಪಿದೆ ಎಂದು ರೈಲ್ವೆಯ ಹಿರಿಯ ಅಧಿಕಾರಿ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ, ಆದರೆ ಎರಡು ಅಪಘಾತಗಳು ಏಕಕಾಲದಲ್ಲಿ ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಳಿತಪ್ಪಿದ 18 ಬೋಗಿಗಳಲ್ಲಿ 16 ಪ್ಯಾಸೆಂಜರ್ ಬೋಗಿಗಳು ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಾಳುಗಳಿಗೆ ರೈಲ್ವೇಯ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಕ್ರಧರಪುರಕ್ಕೆ ಕರೆದೊಯ್ಯಲಾಗಿದೆ. ಈ ಕುರಿತು ಹೇಳಿಕೆ ನೀಡಿದ ರೈಲ್ವೆ ಅಧಿಕಾರಿಗಳು ರೈಲು ಹಳಿ ತಪ್ಪಲು ನಿಖರವಾದ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ, ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Mudhol: ಟ್ರ್ಯಾಕ್ಟರ್ ನೊಂದಿಗೆ ನದಿ ದಾಟಲು ಹೋಗಿ ನೀರಿನಲ್ಲಿ ಸಿಲುಕಿದ ಯುವಕ…