ತುಮಕೂರು: ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶುಭಾಕಲ್ಯಾಣ್ ತಿಳಿಸಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವಾ ಯೋಜನೆ ಜಾರಿಯಾಗಿ ಒಂದು ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಡೀಸಿ ಕಚೇರಿ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 27ಲಕ್ಷ ಜನ ಸಂಖ್ಯೆ ಯಿದ್ದು, ಈಗಾಗಲೇ ಎರಡೂವರೆ ಲಕ್ಷ ಜನರು ಯೋಜನೆಗೆ ನೋಂದಣಿಯಾಗಿದ್ದಾರೆ. ಹೆಲ್ತ್ ಕಾರ್ಡ್ ಹೊಂದುವ ಮೂಲಕ ಪ್ರತಿ ಯೊಬ್ಬರೂ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು. ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ 5 ಲಕ್ಷ ರೂ. ಹಾಗೂ ಬಡತನ ರೇಖೆಗಿಂತ ಮೇಲಿರುವವರಿಗೆ ಚಿಕಿತ್ಸೆ ವೆಚ್ಚದ ಶೇ.30 ರಿಯಾಯಿತಿ ಪಡೆಯಬಹುದು. ಹೆಲ್ತ್ ಕಾರ್ಡ್ ಸೌಲಭ್ಯಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಏಜೆಂಟ್ ನಿಯೋಜಿಸ ಲಾಗಿದ್ದು, ಸಾರ್ವಜನಿಕರು ಸಂಪರ್ಕಿಸಿ ಕಾರ್ಡ್ ಪಡೆಯಬೇಕೆಂದು ಮನವಿ ಮಾಡಿದರು.
ಜಿಲ್ಲೆಗೆ ರಾಜ್ಯದಲ್ಲಿಯೇ ಪ್ರಥಮ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಆರ್. ಚಂದ್ರಿಕಾ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವಾ ಯೋಜನೆ ಪ್ರಗತಿ ಸಾಧನೆಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಸರ್ಕಾರ ಯೋಜನೆಯಡಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ 1650 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 36 ಪ್ಯಾಕೇಜ್‌ಗಳಿಗೆ ಅನುಮೋದನೆ ನೀಡಿದ್ದು, ಜನರು ಯೋಜನೆ¿ ಸದುಪಯೋಗ ಪಡೆದು ಕೊಳ್ಳಬೇಕು. ಎಲ್ಲ ಆರೋಗ್ಯ ಕೇಂದ್ರಗಳು, ತುಮಕೂರು ಒನ್ ಹಾಗೂ ಸೇವಾಸಿಂಧುಗಳಲ್ಲಿ ಹೆಲ್ತ್ಕಾರ್ಡ್ ವಿತರಿಸ ಲಾಗುತ್ತಿದ್ದು, ಈಗಾಗಲೇ 9 ಸಾವಿರ ಜನರು ಹೆಲ್ತ್ ಕಾರ್ಡುಗಳ ಮೂಲಕ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಟಿ.ಎ. ವೀರಭದ್ರಯ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಆಯುಷ್ಮಾನ್ ಆರೋಗ್ಯ ಕರ್ನಾಟಕ ನೋಡಲ್ ಅಧಿಕಾರಿ ಡಾ.ಎಂ.ಚೇತನ್, ಆರ್‌ಸಿಎಚ್ ಅಧಿಕಾರಿ ಡಾ. ಕೇಶವ್‌ರಾಜ್ ಹಾಗೂ ಸುಮಾರು 150 ನರ್ಸಿಂಗ್ ಶಾಲೆ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಜಾಥಾ ಚರ್ಚ್ ಸರ್ಕಲ್ ಮೂಲಕ ಸಾಗಿ ಟೌನ್‌ಹಾಲ್ ವೃತ್ತದಲ್ಲಿ ಕೊನೆಗೊಂಡಿತು.