ಬೆಂಗಳೂರು: ಗ್ರಾಹಕನಿಗೆ ದೋಷಪೂರಿತ ವಾಹನ ನೀಡಿ ಗ್ರಾಹಕ ಸೇವೆ ನೀಡುವಲ್ಲಿ ವಿಫಲವಾದ ಪ್ರತಿಷ್ಟಿತ ಎಲೆಕ್ಟ್ರಿಕ್ ದ್ವಿಚಕ್ರವಾಹನ ಕಂಪನಿಗೆ ಗ್ರಾಹಕ ನ್ಯಾಯಾಲಯವು 1.95 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಂಗಳೂರಿನ ಆರ್.ಟಿ. ನಗರದ ನಿವಾಸಿಯೊಬ್ಬರು 2023ರ ಜುಲೈನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಿದರು. ಅವರು ತಮ್ಮ ಹಳೇ ವಾಹನವನ್ನು 37,500 ರೂ.ಗೆ ಮಾರಾಟ ಮಾಡಿದ ಹಣ ಹಾಗೂ ಹೆಚ್ಚುವರಿ 5000 ರೂ. ಬುಕ್ಕಿಂಗ್ ಮೊತ್ತವನ್ನು ಪಾವತಿಸಿ, 24 ತಿಂಗಳಿಗೆ ಇಎಂಐನಂತೆ ಒಟ್ಟು 1.87 ಲಕ್ಷ ರೂ. ಮೊತ್ತದ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದರು.
ವಾಹನ ಖರೀದಿಸಿದ ತಿಂಗಳಲ್ಲಿ ದೋಷಗಳು ಕಂಡುಬಂದವು. ಬೈಕ್ ಓಡಿಸುವಾಗ ಸ್ಪೀಡೋ ಮೀಟರ್‌ನ ಕಾರ್ಯಾಚರಣೆ ಸ್ಥಗಿತವಾಗಿದೆ. ಇನ್ನೂ ಬೈಕ್‌ನ ಇಂಡಿಕೇಟರ್ ಕೂಡ ಕೆಲಸ ಮಾಡುತ್ತಿರಲಿಲ್ಲ. ಈ ಸಮಸ್ಯೆ ಪ್ರತಿ ನಾಲ್ಕೈದು ದಿನಗಳಿಗೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಈ ಕುರಿತು ಗ್ರಾಹಕ ಸೇವೆ ಸಿಬ್ಬಂದಿಗೆ ದೂರು ನೀಡಿದ್ದರು. ಅನೇಕ ಬಾರಿ ರಿಪೇರಿ ಮಾಡಿಸಿದರೂ ಬೈಕ್‌ನ ಸ್ಪಾಫ್ಟ್ì ವೇರ್‌ನಿಂದಾಗಿ ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತಿತ್ತು. ಇದರಿಂದ ಬೇಸತ್ತ ಗ್ರಾಹಕ ಹೊಸ ಬೈಕ್ ರಿಪ್ಲೇಸ್ ಮಾಡುವಂತೆ ಮ್ಯಾನೇಜರ್‌ಗೆ ಮನವಿ ಮಾಡಿದ್ದರು.
ದೋಷಪೂರಿತ ಬೈಕ್ ಸರಿಪಡಿಸುವಲ್ಲಿ ವಿಫಲವಾದ ಹಾಗೂ ಬೈಕ್ ರಿಪ್ಲೇಸ್ ಮಾಡಲು ಒಪ್ಪದ ಕಂಪನಿಯ ವಿರುದ್ಧ ಬೆಂಗಳೂರು 2ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ನ್ಯಾಯಲಯಕ್ಕೆ ದೂರು ನೀಡಿದ್ದರು. ಈ ವೇಳೆ ಕಸ್ತೂರಿ ನಗರದ ಆರ್‌ಟಿಒನಲ್ಲಿ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿದೆ. ವಾಹನದಲ್ಲಿ ಡೀಸ್ ಪ್ಲೇ ಸಮಸ್ಯೆ, ಹ್ಯಾಂಡಲ್ ಸೇರಿದಂತೆ ವಿವಿಧ ದೋಷಗಳಿವೆ ಎಂದು ವಾಹನ ತಪಾಸಣಾ ಅಧಿಕಾರಿಗಳು ವರದಿ ಮಾಡಿದ್ದಾರೆ. ಈ ವೇಳೆ ಮೂಲ ಮೊತ್ತ ಹಾಗೂ ಪರಿಹಾರ ಸೇರಿದಂತೆ 1.95 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ದೂರದಾರರ ಸಾಕ್ಷಿಯನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯವು, ಗ್ರಾಹಕ ಪಾವತಿಸಿದ 1.54 ಲಕ್ಷ ರೂ.ಗೆ ಶೇ.8ರ ಬಡ್ಡಿ ದರದಲ್ಲಿ ಪಾವತಿ, ಮಾನಸಿಕ ಹಿಂಸೆಗೆ 30 ಸಾವಿರ ರೂ. 10 ಸಾವಿರ ಕೋರ್ಟ್ ಬಾಬ್ತು ಸೇರಿದಂತೆ ಒಟ್ಟು 1.95 ಲಕ್ಷ ರೂ.ವನ್ನು ನವೆಂಬರ್ ಅಂತ್ಯದೊಳಗೆ ಪಾವತಿಸುವಂತೆ ಎಲೆಕ್ಟ್ರಿಕ್ ದ್ವಿಚಕ್ರವಾಹನ ಕಂಪನಿಗೆ ಸೂಚಿಸಿದೆ.