Advertisement

ಕೃಷ್ಣಾ ಮೇಲ್ದಂಡೆ ಯೋಜನೆಗೆ 2 ಲಕ್ಷ ಕೋಟಿ: ಸಿದ್ದರಾಮಯ್ಯ

05:38 PM Jul 16, 2022 | Team Udayavani |

ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಐದು ವರ್ಷದಲ್ಲಿ ಪೂರ್ಣಗೊಳಿಸಲು 2 ಲಕ್ಷ ಕೋಟಿ ಅನುದಾನ ನೀಡುತ್ತೇವೆ ಎಂದು ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

Advertisement

ನಗರದ ಚರಂತಿಮಠ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ನವ ಸಂಕಲ್ಪ ಚಿಂತನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನಾವು 2013ರಲ್ಲಿ ಅಧಿಕಾರಕ್ಕೆ ಬಂದಾಗ, ಇಡೀ ಯುಕೆಪಿ ಯೋಜನೆ ಪೂರ್ಣಗೊಳಿಸಲು 1 ಲಕ್ಷ ಕೋಟಿ ಅನುದಾನ ಬೇಕಿತ್ತು. ಆಗ ನಾವು ಐದು ವರ್ಷದಲ್ಲಿ 50 ಲಕ್ಷ ಕೋಟಿಗೂ ಅಧಿಕ ಅನುದಾನ ಖರ್ಚು ಮಾಡಿದ್ದೇವೆ. ಈಗ ಯೋಜನಾವೆಚ್ಚ ಹೆಚ್ಚಾಗಿದೆ. ಗರಿಷ್ಠ 2 ಲಕ್ಷ ಕೋಟಿ ಅನುದಾನ ಬೇಕಿದೆ. ನಾವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಐದು ವರ್ಷದಲ್ಲಿ 2 ಲಕ್ಷ ಕೋಟಿ ಅನುದಾನ ನೀಡಿ, ಯೋಜನೆ ಪೂರ್ಣಗೊಳಿಸುತ್ತೇವೆ ಎಂದರು. ಬಿಜೆಪಿಯವರು ಮಾತೆತ್ತಿದರೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ.

ಆಲಮಟ್ಟಿ ಜಲಾಶಯ ಕೇವಲ ಬೇಸ್‌ ಮೆಂಟ್‌ ನಿರ್ಮಾಣವಾಗಿತ್ತು. ಆಗ ನಾನು ಹಣಕಾಸು ಸಚಿವನಾಗಿದ್ದೆ. ಬಾಂಡ್‌ ಮೂಲಕ ಹಣ ಸಂಗ್ರಹಿಸಿ, ಜಲಾಶಯ ನಿರ್ಮಾಣ, ಕಾಲುವೆ ಕಾಮಗಾರಿ ಪೂರ್ಣಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದು ನಾನು. ಆದರೆ, ಇದನ್ನು ದೇವೇಗೌಡರು ರಾಜಕೀಯ ಲಾಭ ಪಡೆದಿದ್ದಾರೆ. ಹಣಕಾಸು ಸಚಿವನಾಗಿದ್ದಾಗ ಕೈಗೊಂಡ ಕ್ರಮದಿಂದಲೇ ಜಲಾಶಯ, 519.60 ಮೀಟರ್‌ ವರೆಗೆ ನಿರ್ಮಾಣಗೊಂಡು, ಈಗ ನೀರಾವರಿಯಾಗಲು ಸಾಧ್ಯವಾಗಿದೆ. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ, ಜಲಾಶಯವನ್ನು ಎತ್ತರಿಸಿದರಾ, ಹೆಚ್ಚಿನ ಭೂಮಿಗೆ ನೀರಾವರಿ ಕಲ್ಪಿಸಿದರಾ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದಲ್ಲಿ ಶೇ. 40ರಷ್ಟು ಲಂಚವಿದೆ ಎಂದು ನಾನು ಹೇಳುತ್ತಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ. ಸ್ವತಃ ಪ್ರಧಾನಿಗೂ ಪತ್ರ ಬರೆದಿದ್ದಾರೆ. ಇದೇ ಮೋದಿ ಅವರು ಕಳೆದ ಚುನಾವಣೆ ವೇಳೆ ರಾಜ್ಯಕ್ಕೆ ಬಂದಾಗ, ನಮ್ಮ ಸರ್ಕಾರವನ್ನು ಶೇ.10ರಷ್ಟು ಕಮೀಶನ್‌ ಪಡೆಯುವ ಸರ್ಕಾರ ಎಂದಿದ್ದರು. ಈಗ ಅವರದೇ ಸರ್ಕಾರ, ಶೇ.40ರಷ್ಟು ಲಂಚ ಪಡೆಯುತ್ತಿದ್ದಾರೆ ಎಂದು ಪತ್ರ ಬರೆದರೂ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

Advertisement

ದಲಿತರ ಹಣ ವರ್ಗಾವಣೆ: ನಾವು ಅಧಿಕಾರದಲ್ಲಿದ್ದಾಗ ಎಸ್‌.ಸಿ, ಎಸ್‌.ಟಿ ವರ್ಗದ ಜನರಿಗೆ ನೀಡುವ ಅನುದಾನ ಬಳಕೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದರೆ, ಅವರನ್ನೇ ಹೊಣೆಗಾರರನ್ನಾಗಿ ಮಾಡುವ ಕುರಿತು ಹೊಸ ಕಾನೂನು ತಂದಿದ್ದೇವು. ಆಗ 2.20 ಲಕ್ಷ ಕೋಟಿ ಬಜೆಟ್‌ ಗಾತ್ರ ಇದ್ದಾಗ ಎಸ್‌.ಸಿ, ಎಸ್‌ಟಿ ಜನರ ಕಲ್ಯಾಣಕ್ಕಾಗಿ 30 ಸಾವಿರ ಕೋಟಿ ಕೊಟ್ಟಿದ್ದೇವು. ಈಗ 2.65 ಲಕ್ಷ ಕೋಟಿ ಬಜೆಟ್‌ ಗಾತ್ರವಿದೆ.

ಈಗ 40 ಸಾವಿರ ಕೋಟಿ ಕೊಡಬೇಕಿತ್ತು. ಆದರೆ, ಕೇವಲ 28 ಸಾವಿರ ಕೋಟಿ ಕೊಟ್ಟಿದ್ದಾರೆ. 7 ಸಾವಿರ ಕೋಟಿ ಬೇರೆಡೆ ವರ್ಗಾಯಿಸಿದ್ದಾರೆ. ಈ ಅನ್ಯಾಯ ಮಾಡಿದರೂ, ಬಿಜೆಪಿಯಲ್ಲಿರುವ ದಲಿತ ನಾಯಕರು ಯಾರೂ ಮಾತನಾಡುತ್ತಿಲ್ಲ. ಬಿಜೆಪಿಯಲ್ಲಿ ಯಾರೂ ದಲಿತ ನಾಯಕರೇ ಇಲ್ವಾ ಎಂದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌.ಜಿ. ನಂಜಯ್ಯನಮಠ, ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ವೈ. ಮೇಟಿ, ಉಮಾಶ್ರೀ, ಅಜಯಕುಮಾರ ಸರನಾಯಕ, ಆರ್‌.ಬಿ. ತಿಮ್ಮಾಪುರ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಪ್ರಮುಖರಾದ ಬಸವಪ್ರಭು ಸರನಾಯಕ, ಡಾ|ದೇವರಾಜ ಪಾಟೀಲ, ನಾಗರಾಜ ಹದ್ಲಿ, ಸತೀಶ ಬಂಡಿವಡ್ಡರ, ಆನಂದ ಜಿಗಜಿನ್ನಿ ಮುಂತಾದವರು ಪಾಲ್ಗೊಂಡಿದ್ದರು.

ಬಿಜೆಪಿಗೆ ಸವಾಲು
ಬಿಜೆಪಿಯವರು ಅಧಿಕಾರಕ್ಕೆ ಬರುವ ಮೊದಲು ಏನು ಹೇಳಿದ್ದರು, ಅಧಿಕಾರಕ್ಕೆ ಬಂದ ಬಳಿಕ ಏನು ಮಾಡಿದರು ಎಂಬುದರ ಕುರಿತು ನಾವು ಪುಸ್ತಕ ಹೊರ ತಂದಿದ್ದೇವೆ. ರಾಜ್ಯದ ಪ್ರತಿಯೊಂದು ವಿಧಾನಸಭೆ ಮತಕ್ಷೇತ್ರಕ್ಕೂ ಆ ಪುಸ್ತಕ ಕಳುಹಿಸುತ್ತೇವೆ ಎಂದು ಓದಿಕೊಳ್ಳಿ. ಜನರಿಗೆ ನಿಜವಾದ ಸತ್ಯ ತಿಳಿಸಿ ಎಂದು ಹೇಳಿದರು. ಬಣ್ಣ ಬಣ್ಣದ ಮಾತು ಹೇಳುವುದು ಸುಲಭ. ಅದನ್ನು ಅನುಷ್ಠಾನಕ್ಕೆ ತರುವುದು ಕಷ್ಟ. ಹೇಳಿದಂತೆ ನಡೆದುಕೊಳ್ಳುವುದು ಮುಖ್ಯ. ಪ್ರತಿಯೊಂದು ಯೋಜನೆಗೂ ಶೇ.40ರಷ್ಟು ಲಂಚ ಪಡೆಯಲಾಗುತ್ತಿದೆ. ನಾನು 12 ವರ್ಷ ಹಣಕಾಸು ಸಚಿವನಾಗಿ, 13 ಬಜೆಟ್‌ ಮಂಡಿಸಿದ್ದೇನೆ. ಒಂದು ಎನ್‌ಒಸಿಗೆ ಯಾರಾದರೂ ಒಂದು ಪೈಸೆ ಲಂಚ ಕೊಟ್ಟಿದ್ದೇನೆ ಎಂದು ಹೇಳಿದರೂ ನಾನು ರಾಜಕೀಯ ಬಿಟ್ಟು ಮನೆ ಸೇರುತ್ತೇನೆ ಎಂದು ಸವಾಲು ಹಾಕಿದರು.

ಬಿಜೆಪಿಯವರಿಗೆ ಜಿ.ಪಂ, ತಾ.ಪಂ. ಚುನಾವಣೆಯೂ ಮಾಡಲು ಆಗಿಲ್ಲ. ಇಂತಹ ಬಿಜೆಪಿಯವರಿಂದ ಇಡೀ ರಾಜ್ಯ ಅಭಿವೃದ್ಧಿ ಕುಂಠಿತಗೊಂಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಪ್ರತಿಯೊಬ್ಬರೂ ಈಗಿನಿಂದಲೇ ಚುನಾವಣೆಗೆ ತಯಾರಾಗಿ. ಮುಂದಿನ ಆ. 3ರಂದು ನನಗೆ 75 ವರ್ಷ ತುಂಬಲಿವೆ. ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅದಕ್ಕೆ ರಾಹುಲ್‌ ಗಾಂಧಿ ಕೂಡ ಬರಲಿದ್ದಾರೆ. ನಮ್ಮ ಜಿಲ್ಲೆಯಿಂದಲೂ ಹೆಚ್ಚಿನ ಜನರು ಆಗಮಿಸಬೇಕು.
ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next