Advertisement

ಕನೇರಿಮಠದಿಂದ ಕೇರಳ, ಕೊಡಗಿನ 2 ಗ್ರಾಮ ದತ್ತು 

05:26 PM Aug 30, 2018 | |

ಹುಬ್ಬಳ್ಳಿ: ನೆರೆಪೀಡಿತ ಕೇರಳದಲ್ಲಿ ಜನರು ಬದುಕು ಕಟ್ಟಿಕೊಳ್ಳಲು ಪೂರಕವಾಗಿ ಮಹಾರಾಷ್ಟ್ರದ ಕನೇರಿಮಠ ಕೇರಳದಲ್ಲಿ ಸುಮಾರು 140-180 ಸಣ್ಣ ಸಂಪರ್ಕ ಸೇತುವೆಗಳ ನಿರ್ಮಾಣದ ಜತೆಗೆ ಕೇರಳ ಹಾಗೂ ಕೊಡಗಿನಲ್ಲಿ ತಲಾ ಒಂದು ಗ್ರಾಮ ದತ್ತು ಪಡೆದು ಮಾದರಿ ಗ್ರಾಮಗಳ ನಿರ್ಮಾಣ ಚಿಂತನೆಗೆ ಮುಂದಾಗಿದೆ.

Advertisement

ಕೇರಳದಲ್ಲಿ ಸಮರ್ಪಕ ಪರಿಹಾರ ದೊರೆಯದೆ ಸಂಕಷ್ಟ ಅನುಭವಿಸುತ್ತಿರುವ ವಾರ್ಡ್‌(ಹಳ್ಳಿಗಳು)ಗಳು ಹಾಗೂ ಆದಿವಾಸಿ ಜನರಿಗೆ ಪಡಿತರ, ಬಟ್ಟೆ, ಔಷಧಿ ಹಾಗೂ ಜಾನುವಾರುಗಳಿಗೆ ಮೇವು ಸೇರಿದಂತೆ ಸುಮಾರು 300 ಟನ್‌ ನಷ್ಟು ಸಾಮಗ್ರಿ ವಿತರಣೆಯಲ್ಲಿ ತೊಡಗಿರುವ ಕನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಇದೀಗ ಪರಿಹಾರ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆ ಮುಂದೆ ಹೋಗಿ ಅಲ್ಲಿನ ಗ್ರಾಮಸ್ಥರ ಬೇಡಿಕೆಯಂತೆ ಸೇತುವೆಗಳ ಪುನರ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಕೇರಳಕ್ಕೆ ಹೋಗುವ ಬಹುತೇಕ ಪರಿಹಾರ ಸಾಮಗ್ರಿ ಸರ್ಕಾರ ಆರಂಭಿಸಿರುವ ಶಿಬಿರಗಳಲ್ಲಿನ ಜನರಿಗೆ ತಲುಪುತ್ತಿದೆಯೇ ವಿನಃ, ವಾರ್ಡ್‌(ಕೇರಳದಲ್ಲಿ ಹಳ್ಳಿಗೆ ವಾರ್ಡ್‌ ಎಂದು ಕರೆಯಲಾಗುತ್ತದೆ)ಹಾಗೂ ಅರಣ್ಯ-ಗುಡ್ಡಗಾಡು ಪ್ರದೇಶದಲ್ಲಿರುವ ಆದಿವಾಸಿಗಳಿಗೆ ತಲುಪುತ್ತಿಲ್ಲ. ಪರಿಹಾರ ಸಾಮಗ್ರಿ ದಾಸ್ತಾನು, ಪ್ಯಾಕಿಂಗ್‌ಗಾಗಿ ಕನೇರಿಮಠದಿಂದ ವೈನಾಡು, ತಿರುವಲ್ಲಾ, ಕಾಯಂಕೋಲಂ, ಪರಂಬಾವೂರ, ಕೋಟಮಂಗಲಂನಲ್ಲಿ ಆರು ಬೇಸ್‌ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅಲ್ಲಿಂದ ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶದ ಜನರಿಗೆ ಸಾಮಗ್ರಿ ಸಾಗಿಸಲಾಗುತ್ತಿದೆ.

140-180 ಸೇತುವೆಗಳಿಗೆ ಬೇಡಿಕೆ: ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹಾಗೂ ಶಹರಕ್ಕೆ ಸಂಪರ್ಕ ಕಲ್ಪಿಸುವ ಸಣ್ಣ ಪ್ರಮಾಣದ ಸೇತುವೆಗಳು ಪ್ರವಾಹಕ್ಕೆ ನಾಶವಾಗಿದ್ದು, ಅನೇಕ ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಸಂಪರ್ಕ ಕೊಂಡಿಯಾದ ಸೇತುವೆ ನಿರ್ಮಾಣದ ಬೇಡಿಕೆ ಅಲ್ಲಿನ ಜನತೆಯದ್ದಾಗಿದೆ. ಶ್ರೀಮಠದ ಸ್ವಯಂ ಸೇವಕರು, ವಿವಿಧ ಎನ್‌ಜಿಒಗಳವರು ನಡೆಸಿದ ಸಮೀಕ್ಷೆಯಲ್ಲಿ ಇದಕ್ಕೆ ಜನರು ಒತ್ತು ನೀಡಿದ್ದರಿಂದ ಶ್ರೀಮಠದಿಂದ ಸೇತುವೆ ನಿರ್ಮಾಣ ಚಿಂತನೆ ಕೈಗೊಳ್ಳಲಾಗಿದೆ.

ವೈನಾಡು, ತಿರುವೆಲ್ಲಾ, ಕಾಯಂಕೋಲಂ ಇನ್ನಿತರ ಪ್ರದೇಶಗಳಲ್ಲಿ ಸುಮಾರು 140-180 ಸಣ್ಣ ಸೇತುವೆಗಳು ನಾಶವಾಗಿದ್ದು, ಸರ್ಕಾರದಿಂದ ನಿರ್ಮಾಣ ಸದ್ಯದ ಸ್ಥಿತಿಯಲ್ಲಿ ಕಷ್ಟಸಾಧ್ಯ. ನಿರ್ಮಾಣಕ್ಕೆ ಸರ್ಕಾರ ಈಗಲೇ ಮುಂದಾದರೂ ಕನಿಷ್ಟ ಒಂದು ವರ್ಷವಾದರೂ ಬೇಕಾಗುತ್ತದೆ. ಅಲ್ಲಿವರೆಗೆ ಸಂಪರ್ಕದ ಕಥೆ ಏನು? ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣಕ್ಕೆ ಚಿಂತಿಸುವಂತೆ ಜನರ ಅನಿಸಿಕೆ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ನಿರ್ಧರಿಸಲಾಗಿದೆ.

Advertisement

ಗ್ರಾಮ ದತ್ತು: ಕೇರಳದಲ್ಲಿ ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಮಾದರಿ ಗ್ರಾಮವಾಗಿಸುವ ಚಿಂತನೆ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರದ್ದಾಗಿದೆ. ಅದೇ ರೀತಿ ಕೊಡಗಿನಲ್ಲೂ ಒಂದು ಗ್ರಾಮವನ್ನು ದತ್ತು ಪಡೆಯಲು ಚಿಂತಿಸಲಾಗಿದೆ. ಪಶುಸಂಗೋಪನೆ, ಕೃಷಿ, ಗುಡಿ ಕೈಗಾರಿಕೆ, ಸಣ್ಣ ಪ್ರಮಾಣದ ಆಹಾರ ಸಂಸ್ಕರಣೆ ಯಂತ್ರಗಳು, ರೈತರು ಹಾಗೂ ಜನರ ಸ್ವಾವಲಂಬಿ ಬದುಕಿಗೆ ಪೂರಕವಾಗಿ ಹಳ್ಳಿ ನಿರ್ಮಾಣ, ಜತೆಗೆ ಇದು ಇತರೆ ಗ್ರಾಮದವರನ್ನು ಸಹ ಆಕರ್ಷಿಸುವ ಮೂಲಕ ಮಾದರಿ ಗ್ರಾಮವಾಗಿ ಮಾಡಲು ಚಿಂತಿಸಲಾಗಿದೆ. 25 ಲಕ್ಷ ಮೌಲ್ಯದ ಔಷಧಿ ವಿತರಣೆ ಕನೇರಿ ಮಠದಿಂದ ತೆರಳಿರುವ ಎರಡು ವೈದ್ಯಕೀಯ ತಂಡಗಳು ಹಳ್ಳಿ, ಹಳ್ಳಿಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುತ್ತಿದ್ದು, ನಿತ್ಯ ಸುಮಾರು 800-1000 ಜನರಿಗೆ ತಪಾಸಣೆ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 25 ಲಕ್ಷ ಮೌಲ್ಯದ ಔಷಧಿಗಳನ್ನು ವಿತರಣೆ ಮಾಡಲಾಗಿದೆ.

ಸಿರಿವಂತರಿಗೂ ಸರದಿಯಲ್ಲಿ ನಿಲ್ಲೋ ಸ್ಥಿತಿ
ಕೇರಳದಲ್ಲಿ ಪ್ರವಾಹ ಸ್ಥಿತಿ ಹಲವು ಸಂಕಷ್ಟಗಳನ್ನು ಹುಟ್ಟು ಹಾಕಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೈತುಂಬ ಹಣ ಇರುವ ಸಿರಿವಂತರೂ ಸಹ ನಿತ್ಯದ ಊಟಕ್ಕೆ ಸರದಿಯಲ್ಲಿ ನಿಂತು ಸಾಮಗ್ರಿ ಪಡೆಯುವಂತಾಗಿದೆ. ಪ್ರವಾಹದಿಂದ ಅಲ್ಲಿನ ಮಾರುಕಟ್ಟೆ ಹಾಗೂ ಅಂಗಡಿಗಳು ಮುಚ್ಚಿವೆ. ಪ್ರವಾಹ ಕುಗ್ಗಿದ ನಂತರ ಮಾರುಕಟ್ಟೆ, ಅಂಗಡಿಗಳು ಆರಂಭವಾಗಿದ್ದವಾದರೂ ಹಲವು ಕಡೆಗಳಲ್ಲಿ ಸಾಮಗ್ರಿ ದೊರೆಯದೆ ಜನರು ಅಂಗಡಿಗಳಿಗೆ ನುಗ್ಗಿ ಇದ್ದಬದ್ದ ಸಾಮಗ್ರಿ ಹೊತ್ತೂಯ್ದಿದ್ದರು. ವಿವಿಧ ಕಡೆಗಳಲ್ಲಿ ದುರ್ಬುದ್ಧಿ  ಕೆಲ ವ್ಯಾಪಾರಸ್ಥರು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲು ಮುಂದಾದಾಗ ಆಕ್ರೋಶಗೊಂಡ ಜನ ಧರ್ಮದೇಟು ನೀಡಿದ್ದರಿಂದ ಇಡೀ ಮಾರುಕಟ್ಟೆ, ಅಂಗಡಿಗಳೇ ಬಂದ್‌ ಆಗಿವೆ. ಇದರಿಂದ ಅನೇಕ ಕಡೆಗಳಲ್ಲಿ ಶ್ರೀಮಂತರಿದ್ದರೂ ಊಟಕ್ಕಾಗಿ ದಾನಿಗಳು ನೀಡುವ ಪಡಿತರ ಸಾಮಗ್ರಿ ಪಡೆಯಲು ಸರದಿಯಲ್ಲಿ ನಿಲ್ಲುತ್ತಿದ್ದು, ಕೆಲವರು ಮುಜಗರದಿಂದ ತಮ್ಮ ಪತ್ನಿ ಇಲ್ಲವೆ, ಕುಟುಂಬದ ಇತರರನ್ನು ಸರದಿಯಲ್ಲಿ ನಿಲ್ಲಿಸುತ್ತಿದ್ದಾರೆ.

ಕನೇರಿ ಮಠದಿಂದ ಗ್ರಾಮ ಹಾಗೂ ಆದಿವಾಸಿಗಳ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ, 6-7 ಕೆಜಿ ಗೋಧಿ, 5ಕೆಜಿ ಬೇಳೆ ಸೇರಿದಂತೆ ಅಗತ್ಯ ಪದಾರ್ಥಗಳ ಸುಮಾರು 25-30 ಕೆಜಿ ಪಾಕೆಟ್‌ ನೀಡಲಾಗುತ್ತದೆ. ಒಂದು ಮನೆಗೆ ಕನಿಷ್ಟ ಮೂರು ಸೀರೆಗಳಂತೆ 1 ಲಕ್ಷ ಸೀರೆಗಳನ್ನು ನೀಡಲಾಗುತ್ತಿದ್ದು, ಸಣ್ಣ ಮಕ್ಕಳಿಗೆ ಕನಿಷ್ಟ 2 ಜತೆ ಬಟ್ಟೆ ನೀಡಲಾಗುತ್ತದೆ ಎಂದು ಕೇರಳದಲ್ಲಿ ಪರಿಹಾರ ಸಾಮಗ್ರಿ ವಿತರಣೆಯಲ್ಲಿ ತೊಡಗಿರುವ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಹಳ್ಳಿಗಳು ಹಾಗೂ ಆದಿವಾಸಿ ಜನಾಂಗಕ್ಕೆ ಕೃಷಿ, ಕೃಷಿಗೆ ಪೂರಕ ಕಾರ್ಯ, ಇತರೆ ವೃತ್ತಿ ಇಲ್ಲದೆ ನಿತ್ಯದ ಊಟಕ್ಕೂ ಕಷ್ಟವಾಗಿದೆ. ಕೆಲ ಗ್ರಾಮಗಳಲ್ಲಿ ಜಾನುವಾರುಗಳು ಮೃತಪಟ್ಟಿವೆ. ಉಳಿದ ಜಾನುವಾರುಗಳಿಗೆ 100 ಟನ್‌ ಮೇವು-ಪಶುಆಹಾರ ತಂದಿದ್ದೆವು. ಅದು ಸಾಲದಾಗಿ ತಮಿಳುನಾಡಿನಿಂದ 4-5 ಟ್ರಕ್‌ ಪಶು ಆಹಾರ ತರಿಸಲಾಯಿತು. ಪರಿಹಾರ ಸಾಮಗ್ರಿ ವಿತರಣೆಗೆ ಶ್ರೀಮಠದಿಂದ ಬಂದಿರುವ ಸ್ವಯಂ ಸೇವಕರ ಜತೆಗೆ ಸ್ಥಳೀಯರು ಕೈ ಜೋಡಿಸಿದ್ದಾರೆ ಎಂದು ಸ್ವಾಮೀಜಿ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next