ಬೆಳಗಾವಿ/ಬೈಲಹೊಂಗಲ: ಹತ್ತಿ ಅಂಡಗಿಯನ್ನು ಬೈಲಹೊಂಗಲ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ವಾಪಸ್ಸಾಗುತ್ತಿದ್ದಾಗ ಟ್ರ‍್ಯಾಕ್ಟರ್‌ನ ಟ್ರಾಲಿ ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಕರಿಯಪ್ಪ ಲಕ್ಷಪ್ಪ ನಂದಿ(66) ಹಾಗೂ ಸಂತೋಷ ಮಲ್ಲಪ್ಪ ಮದಲೂರು(17) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಾಯಪ್ಪ ಸಾತಪ್ಪ ಮರೆನ್ನವರ(40), ಟ್ರ‍್ಯಾಕ್ಟರ್ ಚಾಲಕ ರುದ್ರಪ್ಪ ಈರಪ್ಪ ನಾಗನೂರ(32) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಣ್ಣಿಕೇರಿಯಿಂದ ಬೈಲಹೊಂಗಲಕ್ಕೆ ಹತ್ತಿ ಅಂಡಗಿಗಳನ್ನು ಮಾರಾಟ ಮಾಡಿ ವಾಪಸ್ಸಾಗುತ್ತಿದ್ದಾಗ ಟ್ರ‍್ಯಾಕ್ಟರ್‌ನಲ್ಲಿ 25-30 ಸಿಮೆಂಟ್ ಇಟ್ಟಿಗೆಗಳನ್ನು ತರುತ್ತಿದ್ದರು. ಬೈಲವಾಡ ಸಮೀಪ ವೇಗವಾಗಿ ಹೊರಟಿದ್ದ ಟ್ರ‍್ಯಾಕ್ಟರ್ ಟ್ರಾಲಿ ಬೇರ್ಪಟ್ಟಿದೆ. ಟ್ರಾಲಿಯಲ್ಲಿ ಕುಳಿತಿದ್ದ ಕರಿಯಪ್ಪ ಹಾಗೂ ಸಂತೋಷ ಕೆಳಕ್ಕೆ ಉರುಳಿದ್ದು, ಇವರ ಮೈಮೇಲೆ ಇಟ್ಟಿಗೆ ತುಂಬಿದ್ದ ಟ್ರಾಲಿ ಬಿದ್ದಿದೆ. ಬಿದ ರಭಸಕ್ಕೆ ಸ್ಥಳದಲ್ಲಿಯೇ ಇವರಿಬ್ಬರೂ ಮೃತಪಟ್ಟಿದ್ದಾರೆ.
ಮುಂದೆ ಕುಳಿತಿದ್ದ ಪಾಯಪ್ಪ ಹಾಗೂ ಚಾಲಕ ರುದ್ರಪ್ಪ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿ ಮೃತದೇಹಗಳನ್ನು ಹೊರ ತೆಗೆದರು.
ಸ್ಥಳಕ್ಕೆ ಬೈಲಹೊಂಗಲ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಎಂ. ಹೂಗಾರ, ಎಎಸ್‌ಐ ಎಂ.ಕೆ. ಜೈನಾರ, ಸಿಬ್ಬಂದಿ ಎಚ್.ಬಿ. ಮಾದೆನ್ನಿ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ್ಣಿಕೇರಿಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ರಸ್ತೆ ಅಪಘಾತದಲ್ಲಿ ಇಬ್ಬರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೈಲವಾಡ ಹಾಗೂ ಹಣ್ಣಿಕೇರಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆ ಪಕ್ಕದಲ್ಲಿ ಬಿದ್ದ ಟ್ರ‍್ಯಾಕ್ಟರ್ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಮೃತದೇಹಗಳನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ. ಕುಟುಂಬಸ್ಥರು, ಸಂಬಧಿಕರ ರೋದನ ಮುಗಿಲು ಮುಟ್ಟಿತ್ತು. ಇನ್ನು ಕೆಲವೇ ಕಿ.ಮೀ. ದಾಟಿ ಬಂದಿದ್ದರೆ ಎಲ್ಲರೂ ಮನೆಗೆ ವಾಪಸ್ಸಾಗುತ್ತಿದ್ದರು ಎಂದು ರೋದಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.